ಸಾರಾಂಶ
ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಘು ಚಂದನ್ ಶನಿವಾರ ನವದೆಹಲಿಯಲ್ಲಿ ಜೆಡಿಎಸ್ ಮುಖಂಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಲೋಕಸಭೆ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಪ್ರಶ್ನೆಗಳು ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು, ಮಾದಾರ ಚೆನ್ನಯ್ಯ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಅವರ ಹೆಸರುಗಳು ಕೇಳಿ ಬರುತ್ತಿರುವುದರ ನಡುವೆಯೇ ಶನಿವಾರ ದೆಹಲಿಯಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ.ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್ ದೆಹಲಿಯಲ್ಲಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಭೇಟಿ ಮಾಡಿ ಚರ್ಚಿಸಿದ್ದು, ಬಿಜೆಪಿ ಟಿಕೆಟ್ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಶಿರಾ, ಹಿರಿಯೂರು ಹಾಗೂ ಪಾವಗಡ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ಹೇರಳವಾಗಿದ್ದು, ಟಿಕೆಟ್ ನೀಡುವಾಗ ತಮ್ಮ ಮಾತುಗಳಿಗೆ ಪ್ರಾಧಾನ್ಯತೆ ಇರುತ್ತದೆ. ಪಾವಗಡ, ಶಿರಾದಲ್ಲಿ ಭೋವಿ ಸಮುದಾಯದ ಮತಗಳು ಹೇರಳವಾಗಿವೆ. ಹಾಗಾಗಿ ಟಿಕೆಟ್ ನೀಡುವ ಪ್ರಶ್ನೆ ಎದುದಾರಾದಾಗ ತಮ್ಮ ಪರವಾಗಿ ನಿಲ್ಲುವಂತೆ ರಘುಚಂದನ್, ಕುಮಾರ ಸ್ವಾಮಿ ಬಳಿ ವಿನಂತಿಸಿದರು ಎನ್ನಲಾಗಿದೆ. ಚಿತ್ರದುರ್ಗ ಕ್ಷೇತ್ರದ ವಿಷಯ ಬಂದಾಗ ಚರ್ಚಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು ಎನ್ನಲಾಗಿದೆ.ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಖುದ್ದು ಯಡಿಯೂರಪ್ಪ ಅವರು ರಘು ಚಂದನ್ ಬೆಂಬಲಕ್ಕೆ ನಿಂತಿದ್ದರು ಎನ್ನಲಾಗಿದೆ. ಚಿತ್ರದುರ್ಗ ಲೋಕಸಭೆ ಟಿಕೆಟ್ ಇದುವರೆಗೂ ಘೋಷಣೆಯಾಗದ ಹಿನ್ನಲೆ ರಘುಚಂದನ್ ದೆಹಲಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.