ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಶಸ್ತ್ರ ತ್ಯಾಗ: ರಘುನಾಥ ಮಲ್ಕಾಪುರ

| Published : Feb 14 2024, 02:23 AM IST / Updated: Feb 14 2024, 04:18 PM IST

ರಘುನಾಥ ಮಲ್ಕಾಪುರ

ಸಾರಾಂಶ

ಕಾಂಗ್ರೆಸ್ ನಾಯಕರು ಯುದ್ಧಕ್ಕೂ ಮೊದಲೇ ಶಸ್ತ್ರಾಸ್ತ್ರ ತ್ಯಾಗ ಮಾಡುತ್ತಿದ್ದಾರೆ. ಅನೇಕ ನಾಯಕರ ಹೇಳಿಕೆ ಇದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ ಎಂದು ಬಿಜೆಪಿ ಕೊಪ್ಪಳ ಲೋಕಸಭಾ ಕ್ಷೇತ್ರ ಉಸ್ತುವಾರಿ ರಘುನಾಥ ಮಲ್ಕಾಪುರೆ ಹೇಳಿದರು.

ಕೊಪ್ಪಳ: ಕಾಂಗ್ರೆಸ್ ನಾಯಕರು ಯುದ್ಧಕ್ಕೂ ಮೊದಲೇ ಶಸ್ತ್ರಾಸ್ತ್ರ ತ್ಯಾಗ ಮಾಡುತ್ತಿದ್ದಾರೆ. ಅನೇಕ ನಾಯಕರ ಹೇಳಿಕೆ ಇದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ ಎಂದು ಬಿಜೆಪಿ ಕೊಪ್ಪಳ ಲೋಕಸಭಾ ಕ್ಷೇತ್ರ ಉಸ್ತುವಾರಿ ರಘುನಾಥ ಮಲ್ಕಾಪುರೆ ಹೇಳಿದರು.

ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆಯ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿದ ಬಳಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂಡಿಯಾ ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಗೆ ನಾವು ಈಗಾಗಲೇ ಸಜ್ಜಾಗಿದ್ದೇವೆ. ಬೂತ್ ಮಟ್ಟದಲ್ಲಿಯೂ ಸಿದ್ಧತೆ ಮಾಡಿಕೊಂಡಿದ್ದೇವೆ. ನಾವು ಚುನಾವಣೆಯನ್ನು ಕೇವಲ ರಾಜಕೀಯಕ್ಕಾಗಿ ಮಾಡುವುದಿಲ್ಲ, ರಾಷ್ಟ್ರಕ್ಕಾಗಿ ಮಾಡುತ್ತೇವೆ. 

ಹೀಗಾಗಿ, ಅದು ನಿರಂತರವಾಗಿ ನಡೆಯುವ ಪ್ರಕ್ರಿಯೆ ಆಗಿದೆಯೇ ಹೊರತು ಕೇವಲ ಚುನಾವಣೆ ಬಂದಾಗ ಮಾತ್ರ ಮತದಾರರ ಬಳಿ ಹೋಗುವುದು, ಸಿದ್ಧತೆ ಮಾಡಿಕೊಳ್ಳುವುದನ್ನು ಮಾಡುವುದಿಲ್ಲ ಎಂದರು.

ದೇಶದಲ್ಲಿ ಈಗಾಗಲೇ ಇಂಡಿಯಾ ಕೂಟಕ್ಕೆ ಭಾರಿ ಹೊಡೆತ ಬೀಳಲು ಪ್ರಾರಂಭವಾಗಿದೆ. ಅನೇಕರು ಕೂಟ ತ್ಯಜಿಸಿ ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಇದರಿಂದ ದಿಕ್ಕು ತಿಳಿಯದಾಗಿ ಶಸ್ತ್ರತ್ಯಾಗ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿ ಮಾಡಿದ ಕೆಲಸ ಕಾರ್ಯಗಳ ಗ್ಯಾರಂಟಿಯ ಮುಂದೆ ಕಾಂಗ್ರೆಸ್ ಬೋಗಸ್ ಗ್ಯಾರಂಟಿಗಳು ಪ್ರಯೋಜನಕ್ಕಿಲ್ಲದಂತಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರದಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಇದುವರೆಗೂ ಆಗಿಲ್ಲ. 

ಇದರಿಂದ ಈಗಾಗಲೇ ಜನರು ರೋಸಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳು ಸಹ ಪ್ರಯೋಜನಕ್ಕೆ ಬಾರದಂತಾಗಿದೆ ಎಂದರು.

ಪ್ರಧಾನಿ ಮೋದಿ ಮತ್ತು ಮನಮೋಹನ ಸಿಂಗ್ ಸರ್ಕಾರದ ಸಾಧನೆ ತುಲನೆ ಮಾಡುತ್ತಿರುವ ಮತದಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾನೆ. 

ಅಲ್ಲದೆ ರಾಜ್ಯದಲ್ಲಿ ಈ ಬಾರಿ ಮೈತ್ರಿಯನ್ನೊಳಗೊಂಡು 28 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಎಂದರು.

ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಶರಣು ತಳ್ಳಿಕೇರಿ, ಚಂದ್ರಶೇಖರ ಹಲಿಗೇರಿ, ಗಿರಿಗೌಡ, ಜಿ.ವೀರಪ್ಪ, ಕರಿಯಪ್ಪ, ಮಂಜುಳಾ ಕರಡಿ, ಕೆ.ಶರಣಪ್ಪ, ರಾಜೇಶ ಹಿರೇಮಠ, ಪ್ರತಾಪಗೌಡ, ಅನಿಲ ಮೋಕಾ ಇದ್ದರು.

ಕೊಪ್ಪಳ ಸೀಟು ಖಾಲಿ ಇಲ್ಲ: ಕೊಪ್ಪಳ ಎಂಪಿ ಹುದ್ದೆ ಖಾಲಿ ಇಲ್ಲ, ಈಗ ಸಂಗಣ್ಣ ಕರಡಿ ಸಂಸದರಾಗಿರುವುದರಿಂದ ಹುದ್ದೆ ಖಾಲಿ ಇಲ್ಲ ಎಂದು ಮಲ್ಕಾಪುರೆ ಮಾರ್ಮಿಕವಾಗಿ ಹೇಳಿದರು.

ಆಕಾಂಕ್ಷಿಗಳು ಯಾರಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ, ಇದುವರೆಗೂ ಅಂಥ ಅಧಿಕೃತ ಆಕಾಂಕ್ಷಿಗಳ ಯಾದಿ ನಮ್ಮಲ್ಲಿ ಸಿದ್ಧವಾಗಿಲ್ಲ, ಆದರೆ, ದೇಶದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅವರ ಹೆಸರಿನಿಂದ ಗೆದ್ದು ಬರುತ್ತಿದ್ದರು, ಅದಾದ ಮೇಲೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಿಂದ ಸುಲಭವಾಗಿ ಗೆಲ್ಲಬಹುದಾಗಿದೆ. 

ಹೀಗಾಗಿ, ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವುದರಿಂದ ಸಹಜವಾಗಿ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. 

ಆದರೆ, ಕೊಪ್ಪಳ ಎಂಪಿ ಹುದ್ದೆ ಖಾಲಿ ಇಲ್ಲದೆ ಇರುವುದರಿಂದ ಆ ಪ್ರಶ್ನೆ ಬರುವುದಿಲ್ಲ ಎಂದರು. ಆದರೂ ಟಿಕೆಟ್ ಕುರಿತು ಈಗಲೇ ಏನು ಹೇಳಲು ಆಗದು, ಇದನ್ನು ಕೇಂದ್ರ ಸಮಿತಿ ನೋಡಿಕೊಳ್ಳುತ್ತದೆ. 

ನಾವೇನಿದ್ದರೂ ಈಗ ಚುನಾವಣೆ ತಯಾರಿ ಮಾಡುವುದು, ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ನಾವೆಲ್ಲರೂ ಸೇರಿ ಶ್ರಮಿಸುತ್ತೇವೆ ಎಂದರು.

ಸಂಸದ ಸಂಗಣ್ಣ ಕರಡಿ ಅವರು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರು ಜನ ಸೇವೆ ಮಾಡಿದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಂಸದ ಸಂಗಣ್ಣ ಕರಡಿ ಅವರನ್ನು ಬಣ್ಣಿಸಿದರು.

ಬೇಗನೇ ಘೋಷಿಸಲಿ: ಸಂಗಣ್ಣ

ಗೋಷ್ಠಿಯಲ್ಲಿದ್ದ ಸಂಸದ ಕರಡಿ ಸಂಗಣ್ಣ, ಪಕ್ಷ ಯಾರಿಗಾದರೂ ಟಿಕೆಟ್‌ ಘೋಷಣೆ ಮಾಡಲಿ, ಅದಷ್ಟು ಬೇಗನೆ ಘೋಷಣೆ ಮಾಡಬೇಕು ಎನ್ನುವುದು ನಮ್ಮ ಬಯಕೆ ಆಗಿದೆ ಎಂದರು.

ನಾನೂ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದರೆ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಸಹ ಅವರ ಗೆಲುವಿಗೆ ಶ್ರಮಿಸುತ್ತೇನೆ. 

ಪಕ್ಷದಿಂದ ಬೇಗನೆ ಟಿಕೆಟ್ ಘೋಷಣೆಯಾದರೆ ತಯಾರಿಗೆ ಅನುಕೂಲವಾಗುತ್ತದೆ. ಇದೆಲ್ಲವನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.