ನಿರಂತರ ಮಳೆಗೆ ನೆಲಕಚ್ಚಿದ ರಾಗಿ, ತರಕಾರಿ ಬೆಳೆ

| Published : Oct 26 2025, 02:00 AM IST

ಸಾರಾಂಶ

ಜಿಲ್ಲೆಯಲ್ಲಿ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಟೊಮೆಟೋ, ಆಲೂಗಡ್ಡೆ ಜೊತೆಗೆ ಕ್ಯಾರೇಟ್ ಮತ್ತು ಎಲೆಕೋಸು ಬೆಳೆಯುತ್ತಾರೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಸಾವಿರಾರು ಹೇಕ್ಟರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯಲಾಗಿದೆ. ಮಳೆರಾಯನ ಕರಿನೆರಳು ಈ ಬೆಳೆಗಳ ಮೇಲು ಬಿದ್ದಿದ್ದು, ಬಹುತೇಕ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಅಂಗಮಾರಿಗೆ ತುತ್ತಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆನಿರಂತರ ಮಳೆಗೆ ರಾಗಿ, ಸಾಮೆ ಬೆಳೆ ನೆಲಕ್ಕೆ ಉರುಳಿದ್ದು, ಟೊಮೆಟೋ, ಆಲೂಗಡ್ಡೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡ ಪರಿಣಾಮ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹವಾಮಾನದಲ್ಲಿ ವೈಫರೀತ್ಯ ಉಂಟಾಗಿದೆ. ಇದರಿಂದ ಮಳೆಯಾಶ್ರಿತ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ.

ಮಳೆಗೆ ನೆಲ ಕಚ್ಚಿದ ರಾಗಿ

ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಮಳೆಯಾದ ಕಾರಣ ರೈತರು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆದಿದ್ದರು. ಬೆಳೆಗೆ ಸಕಾಲಕ್ಕೆ ಮಳೆಯಾದ ಪರಿಣಾಮ ಬೆಳೆಗೆ ಗೊಬ್ಬರ ಹಾಕಿ ಪೋಷಣೆ ಮಾಡಿದ್ದರಿಂದ ಬೆಳೆಯೂ ಸೊಂಪಾಗಿ ಬೆಳೆದು ನಿಂತು ಉತ್ತಮ ಇಳುವರಿ ಬರುವ ನಿರೀಕ್ಷೆಯಲ್ಲಿ ರೈತರಿಗೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ತೆನೆ ಕಟ್ಟಿದ್ದ ಹಲವು ಕಡೆ ರಾಗಿ ಬೆಳೆ ನೆಲಕ್ಕೆ ಮಕಾಡೆ ಮಲಗಿದೆ. ಇದರಿಂದಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಮನೆ ಸೇರುತ್ತದೆ ಎಂಬ ನಂಬಿಕೆ ಇಲ್ಲದಂತಾಗಿ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.ಜಿಲ್ಲೆಯಲ್ಲಿ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಟೊಮೆಟೋ, ಆಲೂಗಡ್ಡೆ ಜೊತೆಗೆ ಕ್ಯಾರೇಟ್ ಮತ್ತು ಎಲೆಕೋಸು ಬೆಳೆಯುತ್ತಾರೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಸಾವಿರಾರು ಹೇಕ್ಟರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯಲಾಗಿದೆ. ಮಳೆರಾಯನ ಕರಿನೆರಳು ಈ ಬೆಳೆಗಳ ಮೇಲು ಬಿದ್ದಿದ್ದು, ಬಹುತೇಕ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಅಂಗಮಾರಿಗೆ ತುತ್ತಾಗಿದೆ.

ಟೊಮೆಟೋಗೆ ಅಂಗಮಾರಿ ರೋಗ

ಅಂಗಮಾರಿ ರೋಗದಿಂದಾಗಿ ಟೊಮೆಟೋ ಎಲೆ ಕಪ್ಪಾಗಿ ಉದುರುತ್ತಿದ್ದು, ಕಾಯಿ ಸಹ ಬೆಳವಣಿಗೆ ಕಾಣದೆ ಉದುರುತ್ತಿದೆ. ಟೊಮೆಟೋ ಮತ್ತು ಎಲೆಕೋಸಿನಲ್ಲಿ ರೋಗಬಾಧೆ ಹೆಚ್ಚಾಗಿರುವ ಕಾರಣ ಅದರ ನಿಯಂತ್ರಣಕ್ಕೆ ರೈತರು ಸಾವಿರಾರು ರೂ. ಖರ್ಚು ಮಾಡಿ ಕೀಟನಾಶಕ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಪರಿಣಾಮ ಉತ್ತಮ ಇಳುವರಿ, ಗುಣಮಟ್ಟದ ಫಸಲು ಕಾಣಿಸದೆ ರೈತರು ತೀವ್ರ ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೊಳೆಯುತ್ತಿರುವ ತರಕಾರಿ

ಕ್ಯಾರೇಟ್ ಹಾಗೂ ಬೀಟ್ ರೋಟ್ ಬೆಳೆಗಳಲ್ಲೂ ತೇವಾಂಶ ಹೆಚ್ಚಾಗಿ ಗಡ್ಡೆಗಳು ಕೊಳೆಯುವಂತಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿರುವ ಸಮಯದಲ್ಲಿ ಬೆಳೆ ನಾಶವಾಗುತ್ತಿರುವುದರಿಂದ ಮೂರು ಕಾಸು ಆದಾಯ ಕಾಣುವ ಕನಸು ಕಂಡಿದ್ದ ರೈತರಿಗೆ ನಿರಾಸೆ ಉಂಟಾಗಿದೆ. ನಿರಂತರ ಮಳೆಯಿಂದಾಗಿ ವಿವಿಧ ಬೆಳೆಗಳು ನಾಶವಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ.