ಮಕ್ಕಳ ಉತ್ತಮ ಆರೋಗ್ಯಕ್ಕೆ ರಾಗಿ ಮಾಲ್ಟ್ ಸಹಕಾರಿ: ಮೇಯರ್ ಬಿ. ಶ್ವೇತಾ

| Published : Feb 28 2024, 02:31 AM IST

ಸಾರಾಂಶ

ರಾಜ್ಯ ಸರ್ಕಾರವು 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಮಾಡಲು ನಿರ್ಧರಿಸಿದ್ದು, ಇದರಿಂದ ಮಕ್ಕಳಲ್ಲಿ ಇನ್ನಷ್ಟು ಪೌಷ್ಟಿಕತೆ ಹೆಚ್ಚುತ್ತದೆ.

ಬಳ್ಳಾರಿ: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಅವರ ಆರೋಗ್ಯವು ಪೌಷ್ಟಿಕಾಂಶಯುತವಾಗಿ ಬೆಳೆಯಲು ರಾಗಿ ಮಾಲ್ಟ್ ಸಹಕಾರಿಯಾಗಿದೆ ಎಂದು ಮೇಯರ್ ಬಿ. ಶ್ವೇತಾ ತಿಳಿಸಿದರು.

ನಗರದ ಹವಂಭಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಪಿಎಂ ಪೋಷಣ್ ಯೋಜನೆ ಹಾಗೂ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಹಮ್ಮಿಕೊಂಡಿದ್ದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಮಕ್ಕಳ ದೇಹದ ತೂಕವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಮುಖ್ಯವಾಗಿ ಬಡ ಮಕ್ಕಳಲ್ಲಿ ರಕ್ತಹೀನತೆ, ಮೂಳೆ ಗಟ್ಟಿಗೊಳಿಸುವಿಕೆ, ಅಪೌಷ್ಟಿಕತೆ ನಿವಾರಣೆಗೆ ಅನುಕೂಲವಾಗಲಿದೆ ಎಂದರು.

ಮಕ್ಕಳ ಆರೋಗ್ಯ ಬೆಳವಣಿಗೆಗೆ ಪೂರಕವಾಗಿ ರಾಜ್ಯ ಸರ್ಕಾರವು 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಮಾಡಲು ನಿರ್ಧರಿಸಿದ್ದು, ಇದರಿಂದ ಮಕ್ಕಳಲ್ಲಿ ಇನ್ನಷ್ಟು ಪೌಷ್ಟಿಕತೆ ಹೆಚ್ಚುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಉಮಾದೇವಿ ಮಾತನಾಡಿ, ಆರೋಗ್ಯವಂತ ಮಗು, ದೇಶದ ಆಸ್ತಿಯಾಗಿ ಬೆಳೆಯುತ್ತಾನೆ. ಹೀಗಾಗಿ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ರಾಜ್ಯ ಸರ್ಕಾರವು ನೂತನ ಕಾರ್ಯಕ್ರಮ ಜಾರಿಗೊಳಿಸಿರುವುದು ಖುಷಿಯ ಸಂಗತಿಯಾಗಿದೆ ಎಂದರು.

ಡಯಟ್‍ನ ಪ್ರಾಂಶುಪಾಲರಾದ ಹನುಮಕ್ಕ ಮಾತನಾಡಿದರು. ಪಾಲಿಕೆಯ ಸದಸ್ಯರಾದ ಕಲ್ಪನಾ, ಜಿಪಂ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಹವಂಭಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿಂಗಪ್ಪ, ಎಸ್‍ಡಿಎಂಸಿ ಅಧ್ಯಕ್ಷರಾದ ನಾಗಪ್ಪ, ಉಪಾಧ್ಯಕ್ಷ ನೇತಿ ರಘುರಾಮ್ ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.