ವಿಪಕ್ಷ ನಾಯಕರಿಂದ ರಾಗಿಗುಡ್ಡ ಗಲಭೆ ರಾಜ್ಯಾದ್ಯಂತ ಹಬ್ಬಿದೆ
KannadaprabhaNewsNetwork | Published : Oct 08 2023, 12:01 AM IST
ವಿಪಕ್ಷ ನಾಯಕರಿಂದ ರಾಗಿಗುಡ್ಡ ಗಲಭೆ ರಾಜ್ಯಾದ್ಯಂತ ಹಬ್ಬಿದೆ
ಸಾರಾಂಶ
ಎರಡೂ ಗುಂಪಿನವರನ್ನು ಕರೆದು ಈಗ ಶಾಂತಿಸಭೆ ನಡೆಸುವ ಅನಿವಾರ್ಯತೆ ಇದೆ
- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿರೋಧ ಪಕ್ಷದ ನಾಯಕರು ರಾಗಿಗುಡ್ಡ ಗಲಭೆಯನ್ನು ರಾಜ್ಯಾದ್ಯಂತ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಗಿಗುಡ್ಡ ಗಲಭೆಯಲ್ಲಿ ಮೂರೂ ಸಮುದಾಯದವರಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕಿದೆ. ಪೂರ್ವ ನಿಯೋಜಿತ ಕೃತ್ಯವಾಗಿದ್ದರೆ ಮೆರವಣಿಗೆ ದಿನವೇ ಇಡೀ ನಗರಕ್ಕೆ ಗಲಭೆ ವ್ಯಾಪಿಸುತ್ತಿತ್ತು. ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ತೆಗೆದುಕೊಂಡ ಹೋದ ಡಿಸಿ, ಎಸ್‌ಪಿ ಶ್ರಮ ಮೆಚ್ಚುವಂಥದ್ದು. ಎರಡೂ ಗುಂಪಿನವರನ್ನು ಕರೆದು ಈಗ ಶಾಂತಿಸಭೆ ನಡೆಸುವ ಅನಿವಾರ್ಯತೆ ಇದೆ ಎಂದರು. ಈಶ್ವರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ: ತಲ್ವಾರ್‌ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಆದರೆ ಇವರ ಮಕ್ಕಳು ಹಿಂದುತ್ವಕ್ಕಾಗಿ ತಲ್ವಾರ್ ಹಿಡಿದಿದ್ದಾರಾ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರಿಗೆ ಪ್ರಶ್ನಿಸಿದರು. ಇ.ಡಿ ದಾಳಿ ರಾಜಕೀಯಪ್ರೇರಿತ: ಆರ್.ಎಂ.ಮಂಜುನಾಥ್ ಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದೇ ತಪ್ಪಾಯಿತೆ ಎನ್ನಿಸುತ್ತಿದೆ. ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಕೇಂದ್ರ ಸರ್ಕಾರ ಈಗ ಇ.ಡಿ ಮೂಲಕ ಸೇಡಿನ ತನಿಖೆ ನಡೆಸುತ್ತಿದೆ. ಇದು ರಾಜಕೀಯಪ್ರೇರಿತ ದಾಳಿ. ಅನಗತ್ಯವಾಗಿ ರಾಜಕೀಯ ಮೇಲ್ಪಂಕ್ತಿಯ ನಾಯಕನ ತೇಜೋವಧೆ ಮಾಡಲಾಗುತ್ತಿದೆ. ಇ.ಡಿ.ಯನ್ನು ಏಡಿಯ ರೀತಿ ಬೆಳೆಸುತ್ತಿದ್ದಾರೆ. ಬಿಜೆಪಿಯ ನಾಯಕರ ಮೇಲೆ ಇ.ಡಿ ದಾಳಿ ಏಕಿಲ್ಲ? ಅವರ ಆಸ್ತಿಗಳ ತಪಾಸಣೆ ಏಕಿಲ್ಲ ಎಂದು ಪ್ರಶ್ನಿಸಿದರು. - - - ಟಾಪ್ ಕೋಟ್ ಬಿಜೆಪಿ ನಾಯಕರು ಸತ್ಯಶೋಧದ ಹೆಸರಿನಲ್ಲಿ ನಗರವನ್ನು ಪ್ರಕ್ಷುಬ್ಧಗೊಳಿಸುವ ಹೇಳಿಕೆ ನೀಡಬಾರದು. ಜಿಲ್ಲೆಗೆ ಹೊರಗಿನ ರಾಜಕಾರಣಿಗಳು ಬರಲು ತೊಂದರೆ ಇಲ್ಲ. ಆದರೆ, ಅವರು ಸತ್ಯಶೋಧನೆ ಹೆಸರಲ್ಲಿ ನಗರವನ್ನು ಪ್ರಕ್ಷುಬ್ಧಗೊಳಿಸುವ ಹೇಳಿಕೆ ನೀಡಬಾರದು. ಶಾಂತಿ ಮರುಸ್ಥಾಪನೆಗೆ ಜಿಲ್ಲಾಡಳಿತ ಸೇರಿ ಎಲ್ಲರ ಸಹಕಾರ ಅಗತ್ಯ - ಆಯನೂರು ಮಂಜುನಾಥ್, ಮುಖಂಡ - - - (-ಫೋಟೋ: ಆಯನೂರು ಮಂಜುನಾಥ್)