ಸಾರಾಂಶ
ರಾಮಕೃಷ್ಣ ದಾಸರಿ
ರಾಯಚೂರು : ಎರಡ್ಮೂರು ವರ್ಷಗಳ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ಹೊಸದಾಗಿ ಉದಯಿಸಿದ ರಾಯಚೂರು ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಅನುದಾನ ಸರಿಯಾಗಿ ಬಾರದ ಪರಿಣಾಮ ಬಾಲಗ್ರಹದಿಂದ ಬಳಲುತ್ತಿದ್ದು, ಏಳಿಗೆ ಕಾಣದೆ ಪರಿತಪಿಸುತ್ತಿದೆ.
ಬಹುತೇಕ ವಿವಿಗಳಂತೆ ಇಲ್ಲಿಯೂ ಅತಿಥಿ ಉಪನ್ಯಾಸಕರಿಂದಲೇ ಪಾಠ-ಪ್ರವಚನಗಳು ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲವೇ ಇಲ್ಲ. ಬೇರೆ, ಬೇರೆ ಮೂಲಗಳಿಂದ ಅನುದಾನ ತರಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇಂತಹ ಪರಿಸ್ಥಿತಿಯ ನಡುವೆ ರಾಯಚೂರು ವಿವಿ ತಡವರಿಸಿಕೊಂಡು ಹೆಜ್ಜೆ ಇಡುತ್ತಿದೆ.
ಉನ್ನತ ಶಿಕ್ಷಣ ಪ್ರಮಾಣ ತೀರಾ ಕಡಿಮೆ ಇರುವ ಪ್ರದೇಶದಲ್ಲಿ ಹೊಸದಾಗಿ ಪ್ರತ್ಯೇಕ ವಿವಿ ಆರಂಭಿಸಿ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸಿಕೊಡಬೇಕು ಎನ್ನುವ ಉದ್ದೇಶದಿಂದ ಕಾರ್ಯಾರಂಭಗೊಂಡ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ, ಖಾಯಂ ಬೋಧಕ, ಬೋಧಕೇತರ ಸಿಬ್ಬಂದಿಯ ತೀವ್ರ ಕೊರತೆ, ಬರುವ ಅಲ್ಪ-ಸ್ವಲ್ಪ ಅನುದಾನದಲ್ಲಿ ಭೌತಿಕ ಪ್ರಗತಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗದೆ ನಲುಗುತ್ತಿದೆ.
ಹಲವಾರು ದಶಕಗಳ ಕಾಲ ಗುಲ್ಬರ್ಗ ವಿವಿ ಅಡಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಉನ್ನತ ಶಿಕ್ಷಣ ಸಾಗಿತ್ತು. 2022-23ರಲ್ಲಿ ವಿಭಜನೆಗೊಂಡು ಹೊಸದಾಗಿ ರಾಯಚೂರು ವಿವಿ ಆಗಿ ಮಾರ್ಪಟ್ಟಿತು. ಆರಂಭದಲ್ಲಿಯೇ ಕೋವಿಡ್ ಕರಾಳ ದಿನಗಳ ಕಹಿಯನ್ನು ಅನುಭವಿಸಿದ್ದರಿಂದ 2023-24, 2024-25 ಮತ್ತು 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿವಿಯ ಕಾರ್ಯ ಚಟುವಟಿಕೆಗಳು ಒಂದೊಂದಾಗಿ ಅನುಷ್ಠಾನಗೊಳ್ಳುತ್ತಾ ಸಾಗಿವೆ. ವಿವಿ, ಆರಂಭದಿಂದಲೂ ಸಿಬ್ಬಂದಿ ಕೊರತೆ ಜೊತೆಗೆ ಆರ್ಥಿಕ ಬಿಕ್ಕಟ್ಟು, ಭೌತಿಕ ಅಭಿವೃದ್ಧಿಯ ಸವಾಲಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ನರಳುತ್ತಿದೆ.
ಮೂರೇ ಮಂದಿ ಖಾಯಂ ಬೋಧಕ ಸಿಬ್ಬಂದಿ!: ತಲಾ 200 ಬೋಧಕ-ಬೋಧಕೇತರ ಹುದ್ದೆಗಳಿರುವ ಎಎಸ್‌ಎಂವಿಯುಆರ್‌ನಲ್ಲಿ ಕೇವಲ ಮೂರು ಜನರು ಮಾತ್ರ ಖಾಯಂ ಬೋಧಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ ಬೋಧಕ ಹಾಗೂ ಬೋಧಕೇತರ ಹುದ್ದೆಗಳಲ್ಲಿ ಅತಿಥಿ ಉಪನ್ಯಾಸಕರು, ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ವಿವಿಯನ್ನು ನಡೆಸಲಾಗುತ್ತಿದೆ. ವಿವಿಯಲ್ಲಿ 20 ಪಿಜಿ ವಿಭಾಗಗಳಿದ್ದು, ಮೈಕ್ರೋ ಬಯಾಲಜಿ, ರಾಜ್ಯಶಾಸ್ತ್ರ ಹಾಗೂ ಕೆಮಿಸ್ಟ್ರಿ ವಿಷಯಗಳಿಗೆ ಮಾತ್ರ ಖಾಯಂ ಸಿಬ್ಬಂದಿಯಿದ್ದಾರೆ.
ಮಿಕ್ಕಂತೆ 84 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. 31 ಬೋಧಕ ಹುದ್ದೆಯಲ್ಲಿ ಇಬ್ಬರು ಪ್ರೊಫೆಸರ್, 5 ಜನ ಅಸೋಸಿಯೇಟ್ ಪ್ರೊಫೆಸರ್, 24 ಸಹಾಯಕ ಪ್ರೊಫೆಸರ್ ಭರ್ತಿಗೆ ಕ್ರಮ ವಹಿಸಲಾಗಿದೆ. ಇನ್ನು, 89 ಜನ ಬೋಧಕೇತರ ಸಿಬ್ಬಂದಿಯಲ್ಲಿ 20 ಸೆಕ್ಯೂರಿಟಿ ಗಾರ್ಡ್, 10 ಸಫಾಯಿ ಕರ್ಮಚಾರಿ, 36 ಕಚೇರಿ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದು, 47 ಜನರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕೇಳಿದ್ದು ₹330 ಕೋಟಿ, ಕೊಟ್ಟಿದ್ದು ₹2.23 ಕೋಟಿ!ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ, ಅಗತ್ಯಕ್ಕನುಸಾರವಾಗಿ ವಿವಿಧ ಕಟ್ಟಡಗಳ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ 330 ಕೋಟಿ ರು.ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೇವಲ 2.23 ಕೋಟಿ ರು. ಮಾತ್ರ ಸರ್ಕಾರ ಮಂಜೂರು ಮಾಡಿದೆ.
ಇದನ್ನು ಸಿಬ್ಬಂದಿ ಸಂಬಳ ಹಾಗೂ ಪರೀಕ್ಷೆ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು, ಕೆಕೆಆರ್‌ಡಿಬಿಯಿಂದ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ) ತಳಿಶಾಸ್ತ್ರ ಅಧ್ಯಯನಕ್ಕಾಗಿ ₹45 ಕೋಟಿ ನೀಡಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯಪಾಲರ ವಿವೇಚನಾ ನಿಧಿಯಿಂದ ಸೆಂಟರ್ ಆಫ್ ಎಕ್ಸಲ್ ಇನ್ ಆರ್ಟಿಫಿಷಲ್ ಇಂಟಲಿಜೆನ್ಸ್ ಸ್ಥಾಪನೆಗೆ ₹34 ಕೋಟಿ ಹಾಗೂ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ₹7 ಕೋಟಿ ಅನುದಾನ ಮಂಜೂರಾಗಿದೆ. ಇದನ್ನು ಬಿಟ್ಟರೆ, ಉಳಿದಂತೆ ಯಾವುದೇ ಅನುದಾನ ಬಂದಿಲ್ಲ. ಇನ್ನು, ವಿವಿಯ ಖಾಯಂ ಸಿಬ್ಬಂದಿಗೆ ಸರ್ಕಾರದ ಎಚ್‌ಆರ್‌ಎಂಎಸ್‌ನಿಂದ ಪ್ರತಿ ಮಾಸ ವೇತನ ಪಾವತಿಯಾಗುತ್ತಿದ್ದು, ಉಳಿದಂತೆ 84 ಅತಿಥಿ ಉಪನ್ಯಾಸಕರು, 89 ಬೋಧಕೇತರ ಸಿಬ್ಬಂದಿಗೆ ಆಂತರಿಕ ಆರ್ಥಿಕ ಮೂಲಗಳಿಂದಲೇ ಸಂಬಳ ನೀಡಲಾಗುತ್ತಿದೆ.
ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿವಿ ಆಗಿ ಮರು ನಾಮಕರಣ
ಇಷ್ಟು ದಿನ ರಾಯಚೂರು ವಿವಿ ಹೆಸರಿನಲ್ಲಿಯೇ ಕಾರ್ಯಭಾರ ನಡೆಸಿದ ವಿವಿ, ಇತ್ತೀಚೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ, ರಾಯಚೂರು (ಎಎಸ್‌ಎಂವಿಯುಆರ್) ಎಂದು ಮರುನಾಮಕರಣಗೊಂಡಿದೆ. ರಾಯಚೂರು ತಾಲೂಕಿನ ಯರಗೇರಾ ಸಮೀಪದ 250 ಎಕರೆ ವಿಶಾಲ ಪ್ರದೇಶದಲ್ಲಿ ವಿವಿ ಕ್ಯಾಂಪಸ್ ನಡೆಯುತ್ತಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 190 ಕಾಲೇಜುಗಳ ವ್ಯಾಪ್ತಿಯನ್ನೊಳಗೊಂಡಿದ್ದು, ಇದರಲ್ಲಿ 20 ಸರ್ಕಾರಿ, 8 ಅನುದಾನಿತ, 147 ಅನುದಾನ ರಹಿತ, 15 ಬಿ.ಎಡ್. (ಎರಡು ಅನುದಾನ ) ಹಾಗೂ ಎರಡು ಬಿ.ಪಿಎಡ್ ಸೇರಿದಂತೆ ಒಟ್ಟು 190 ಕಾಲೇಜುಗಳು ಸೇರಿವೆ. ರಾಯಚೂರು ಜಿಲ್ಲೆಯಲ್ಲಿ 12 ಸರ್ಕಾರಿ, 5 ಅನುದಾನಿತ, 82 ಅನುದಾನ ರಹಿತ, 10 ಬಿ.ಎಡ್ ಹಾಗೂ ಎರಡು ಬಿ.ಪಿಎಡ್ ಕಾಲೇಜುಗಳು ಸೇರಿ ಒಟ್ಟು 110 ಕಾಲೇಜುಗಳು, ಯಾದಗಿರಿಯಲ್ಲಿ 8 ಸರ್ಕಾರಿ, 3 ಅನುದಾನಿತ, 64 ಅನುದಾನ ರಹಿತ, 5 ಬಿ.ಎಡ್ ಸೇರಿ ಒಟ್ಟು 80 ಕಾಲೇಜುಗಳಿವೆ.
ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ 20 ಸಾವಿರ ವಿವಿಧ ಪದವಿ (ಯುಜಿ) ಹಾಗೂ 2 ಸಾವಿರ ಸ್ನಾತಕೋತ್ತರ ಪದವಿಗಳಿಗೆ (ಪಿಜಿ) ಪ್ರವೇಶಾತಿಯಾಗುತ್ತಿದ್ದು, ಒಟ್ಟಾರೆ 3 ವರ್ಷದಲ್ಲಿ ವಿವಿಯಲ್ಲಿ ಯುಜಿಗೆ 60 ಸಾವಿರ ಹಾಗೂ ಪಿಜಿಗೆ 4 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ವಿವಿ ಕ್ಯಾಂಪಸ್‌ನಲ್ಲಿನ ಒಟ್ಟು 1,800 ಸ್ನಾತಕೋತ್ತರ ಸೀಟ್‌ಗಳಲ್ಲಿ 900 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಶೇ.50 ರಷ್ಟು ಮಾತ್ರ ಭರ್ತಿಯಾಗಿವೆ.
ನೀಲನಕ್ಷೆ ದೊಡ್ಡದು, ಆರ್ಥಿಕ ಬಲ ಚಿಕ್ಕದು
ನೂತನ ವಿವಿ ಆಗಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳ ಪರಿಪೂರ್ಣ ಅನುಷ್ಠಾನ ಗೌಣವಾಗಿವೆ. ಒಂದೇ ಕಟ್ಟಡದಲ್ಲಿ ಆಡಳಿತ ಹಾಗೂ ಪರೀಕ್ಷಾ ವಿಭಾಗಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕು ಎನ್ನುವ ಕಾರಣಕ್ಕೆ ದೊಡ್ಡಮಟ್ಟದಲ್ಲಿಯೇ ನೀಲನಕ್ಷೆಯನ್ನು ರೂಪಿಸಲಾಗಿದೆ. ಆದರೆ, ಅದಕ್ಕೆ ಆರ್ಥಿಕ ಬಲ ಚಿಕ್ಕದಾಗಿದೆ. ವಿವಿಯಲ್ಲಿ ವಿಷಯವಾರು ತರಗತಿ ಕೊಠಡಿಗಳು, ಪ್ರಾಯೋಗಿಕ ಕೇಂದ್ರ, ಪ್ರತ್ಯೇಕ ಪರೀಕ್ಷಾ ಭವನದ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿ ನಿಲಯಗಳು, ಸಕಲ ಸವಲತ್ತುಗಳ ಕ್ರೀಡಾಂಗಣ, ಶಿಕ್ಷಣಸ್ನೇಹಿ ಉದ್ಯಾನವನ ನಿರ್ಮಾಣ, ಇದರೊಟ್ಟಿಗೆ ಖಾಯಂ ಸಿಬ್ಬಂದಿ ನಿಯೋಜನೆ, ಕೌಶಲ್ಯದಿಂದ ಕೂಡಿದ ಅರ್ಹ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ವಿವಿ ಯೋಚನೆ ನಡೆಸಿದೆ.
ಕೈ ಹಿಡಿಯದ ಕೆಕೆಆರ್‌ಡಿಬಿ
ಪ್ರತಿ ವರ್ಷ ವಿವಿಯಿಂದ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ರು.ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಕಲಂ ಜಾರಿಗೊಂಡು ದಶಕವೇ ಗತಿಸಿದೆ. ಈ ಭಾಗದ ಭೌತಿಕ ಪ್ರಗತಿಗಾಗಿಯೇ ಇರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ ₹5 ಸಾವಿರ ಕೋಟಿ ಅನುದಾನ ನೀಡುತ್ತಿದ್ದರೂ ಅದರಿಂದ ಈ ವಿವಿಯ ಅಭಿವೃದ್ಧಿಗೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಲಭಿಸಿಲ್ಲ.
ವಿವಿ ವ್ಯಾಪ್ತಿಗೆ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ 11 ಶಾಸಕರು, ಮೂರ್ನಾಲ್ಕು ಎಂಎಲ್ಸಿಗಳು ಹಾಗೂ ಒಬ್ಬರು ಸಂಸದರು ಕೆಕೆಆರ್‌ಡಿಬಿಯಿಂದ ಹೆಚ್ಚುವರಿ ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿರುವುದರಿಂದ ಇಂದು ಹೊಸ ವಿವಿ ಸಮಗ್ರ ಅಭಿವೃದ್ಧಿ ಮಟ್ಟವನ್ನು ಕಾಣದೆ ಕಂಗಾಲಾಗಿದೆ.
ವಿವಿಯಲ್ಲಿ ಮೂರು ಜನರು ಮಾತ್ರ ಖಾಯಂ ಸಿಬ್ಬಂದಿ ಇದ್ದಾರೆ. ಬೋಧಕ-ಬೋಧಕೇತರ ಹುದ್ದೆಗಳ ಭರ್ತಿ ಕಾರ್ಯ ನಡೆಯಬೇಕಾಗಿದೆ. ಸದ್ಯಕ್ಕೆ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ಆಧಾರದಡಿ ಬೋಧಕ-ಬೋಧಕೇತರರನ್ನು ನಿಯೋಜಿಸಿಕೊಳ್ಳಲಾಗಿದೆ. ವಿವಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿಲ್ಲ. ಆದರೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಅದನ್ನು ಪಡೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
- ಡಾ.ಸುಯಮೀಂದ್ರ ಕುಲಕರ್ಣಿ, ಕುಲಪತಿಗಳು (ಹಂಗಾಮಿ), ಎಎಸ್‌ಎಂವಿಯು, ರಾಯಚೂರು.