ರಾಯಚೂರು ವಿವಿಗೆ ಸಿಬ್ಬಂದಿ ಕೊರತೆಯ ಬಾಧೆ

| Published : Jan 05 2025, 01:34 AM IST

ಸಾರಾಂಶ

ರಾಯಚೂರು ವಿವಿಯಲ್ಲಿ 517 ಬೋಧಕ, 1017 ಬೋಧಕೇತರ ಸೇರಿ ಒಟ್ಟು 1,534 ಹುದ್ದೆಗಳಲ್ಲಿ ಪ್ರಸ್ತುತ 264 ಬೋಧಕ ಹಾಗೂ 451 ಬೋಧಕೇತರರು ಸೇರಿ ಒಟ್ಟು 715 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ 253 ಬೋಧಕ, 566 ಬೋಧಕೇತರರು ಸೇರಿ ಒಟ್ಟು 819 ಹುದ್ದೆಗಳು ಖಾಲಿಯಿವೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಬೆಳೆಗಳಿಗೆ ಯಾವ ರೀತಿಯಾಗಿ ಕೀಟಗಳ ಬಾಧೆ ಉಂಟಾಗುತ್ತದೆಯೋ ಅದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಏಕೈಕ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿ ಕೊರತೆ ಸೋಂಕು ಹರಡಿಕೊಂಡಿದ್ದು, ಇದರಿಂದಾಗಿ ವಿವಿಯಿಂದ ನಡೆಯುವ ಕೃಷಿ ಶಿಕ್ಷಣ, ಸಂಶೋಧನೆ, ವಿಸ್ತರಣೆ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ.ರಾಯಚೂರು ಸೇರಿದಂತೆ ಈ ಭಾಗದ ಬೀದರ್‌, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕೃಷಿ ವಿಜ್ಞಾನಗಳ ವಿವಿಯಡಿಯಲ್ಲಿ 6 ಕೃಷಿ ಪದವಿ (ತಾಂತ್ರಿಕ) ಮಹಾವಿದ್ಯಾಲಯಗಳು, 14 ಕೃಷಿ ಸಂಶೋಧನಾ ಕೇಂದ್ರಗಳು, 6 ಕೃಷಿ ವಿಜ್ಞಾನಗಳ ಕೇಂದ್ರ ಸೇರಿದಂತೆ ಅನೇಕ ಅಂಗ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸರಾಸರಿ ಶೇ.40 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೋಧಕ ಅದೇ ರೀತಿ ಶೇ.50 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೋಧಕೇತರ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲವನ್ನೂ ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.ಎಷ್ಟು ಹುದ್ದೆಗಳು ಖಾಲಿ?: ವಿವಿಯಲ್ಲಿ 517 ಬೋಧಕ, 1017 ಬೋಧಕೇತರ ಸೇರಿ ಒಟ್ಟು 1,534 ಹುದ್ದೆಗಳಲ್ಲಿ ಪ್ರಸ್ತುತ 264 ಬೋಧಕ ಹಾಗೂ 451 ಬೋಧಕೇತರರು ಸೇರಿ ಒಟ್ಟು 715 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ 253 ಬೋಧಕ, 566 ಬೋಧಕೇತರರು ಸೇರಿ ಒಟ್ಟು 819 ಹುದ್ದೆಗಳು ಖಾಲಿಯಿವೆ. ಕೆಲ ದಿನಗಳ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ 95 ಜನರನ್ನು ಆಯ್ಕೆ ಮಾಡಿದ್ದರೂ ಸಹ ನೇಮಕಾತಿಗೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಅದು ನನೆಗುದಿಗೆ ಬಿದ್ದಿದೆ. ವಿವಿ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲಿ ಅಗತ್ಯಕ್ಕನುಗುಣವಾಗಿ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಇರುವ ಸಿಬ್ಬಂದಿಯನ್ನೇ ಬೋಧಕ-ಸಂಶೋಧನೆ ಹಾಗೂ ವಿಸ್ತರಣೆಗೆ ಬಳಸಿಕೊಳ್ಳುತ್ತಾ ಮ್ಯಾನೇಜ್‌ ಮಾಡಲಾಗುತ್ತಿದೆ.ಗುಣಮಟ್ಟದ ಕೃಷಿ ಶಿಕ್ಷಣದ ಸವಾಲು

ಸರಿಸುಮಾರು ಶೇ.50 ರಷ್ಟು ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿರುವ ವಿವಿಗೆ ಗುಣಮಟ್ಟದ ಕೃಷಿ ಶಿಕ್ಷಣವನ್ನು ಕಲ್ಪಿಸಿಕೊಡುವುದೇ ಸವಾಲಾಗಿ ಮಾರ್ಪಟ್ಟಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಜನ ಕೃಷಿಯನ್ನೇ ಅವಲಂಭಿಸಿದ್ದಾರೆ, ಕೃಷ್ಣಾ ಹಾಗೂ ತುಂಗಭದ್ರಾ ಸೇರಿ ಇತರೆ ನದಿಗಳು ಹರಿ ಯುತ್ತಿದ್ದು, ನೀರಾವರಿ ಪ್ರಾಂತವೂ ಆಗಿದೆ. ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ, ಜೋಳ ಸೇರಿದಂತೆ ತೋಟಗಾರಿಕೆ, ಸಿರಿಧಾನ್ಯಗಳ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ದೇಶದ ಬೆನ್ನೆಲುಬು ಅನ್ನದಾತರಾಗಿದ್ದರೆ, ರೈತರಿಗೆ ಬೆನ್ನೆಲುವಾಗಿ ನಿಲ್ಲುವ ಗುರುತರ ಜವಾಬ್ದಾರಿಯನ್ನು ಹೊತ್ತಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ತಾವು ವೃದ್ಧ ಹೊಂದುವುದರ ಜೊತೆಗೆ ರೈತರನ್ನು ಸದೃಢಗೊಳಿಸಬೇಕಾದರೆ ಅಗತ್ಯವಿರುವ ಬೋಧಕ-ಬೋಧಕೇತರ ಸಿಬ್ಬಂದಿ ಜರೂರಿಯಿದ್ದು, ಈ ಭಾಗದ ಸಚಿವರು, ಶಾಸಕರ ಸರ್ಕಾರದ ಮೇಲೆ ಒತ್ತಡ ಹೇರಿ ಖಾಲಿ ಹುದ್ದೆಗಳ ನೇಮಕಕ್ಕೆ ಮುಂದಾಗಬೇಕು ಎನ್ನುವುದು ಜನರ ಒತ್ತಾಸೆಯಾಗಿದೆ.

ಇನ್ನು, ರಾಯಚೂರು ಕೃಷಿ ವಿಜ್ಞಾನಗಳ ವಿವಿ ವ್ಯಾಪ್ತಿಯಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆಯನ್ನು ನೀಗಿಸಲು ಅಗತ್ಯಕ್ಕನುಸಾರವಾಗಿ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ಮಾಡಿಕೊಳ್ಳಲಾಗಿದೆ. ಖಾಲಿ ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಎಷ್ಟೇ ಕೊರತೆಯಿದ್ದರೂ ಗುಣಮಟ್ಟದ ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎನ್ನುತ್ತಾರೆ ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ.