ಸಾರಾಂಶ
ಕೊಪ್ಪಳ: ಸೇತುವೆ ನಿರ್ಮಾಣವಾಗಿದ್ದರೂ ಲಿಂಕ್ ರಸ್ತೆ ಇಲ್ಲದ ಕಾರಣ ಸಂಚಾರಕ್ಕೆ ಬಂದಾಗಿದ್ದ ರೈಲ್ವೆ ಗೇಟ್ 63ರಲ್ಲಿ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲು ರೈಲ್ವೆ ಇಲಾಖೆ ಕಾಮಗಾರಿ ಪ್ರಾರಂಭಿಸಿದೆ.
ರೈಲ್ವೆ ಗೇಟ್ 63 ಹೋರಾಟ ಸಮಿತಿಯ ಹೋರಾಟ, ಅದರಲ್ಲೂ ಮಹಿಳೆಯರ ಆಕ್ರೋಶಕ್ಕೆ ಮಣಿದ ರೈಲ್ವೆ ಇಲಾಖೆ ಎಚ್ಚೆದ್ದು, ರೈಲ್ವೆ ಗೇಟ್ 63ರಲ್ಲಿ ಸಂಚಾರಕ್ಕೆ ತುರ್ತು ಕ್ರಮ ವಹಿಸಲು ಮುಂದಾಗಿದ್ದು, ಶುಕ್ರವಾರ ಕಾಮಗಾರಿ ಪ್ರಾರಂಭಿಸಿದೆ.ಸಂಸದ ರಾಜಶೇಖರ ಹಿಟ್ನಾಳ ವಿರುದ್ಧ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಎಚ್ಚೆತ್ತ ಸಂಸದ ರಾಜಶೇಖರ ಹಿಟ್ನಾಳ ತಕ್ಷಣ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಸಂಚಾರಕ್ಕೆ ತುರ್ತಾಗಿ ಅವಕಾಶ ಮಾಡಿಕೊಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಗುರುವಾರ ಪ್ರತಿಭಟನೆ ನಡೆದ ಬೆನ್ನಲ್ಲೇ ಶುಕ್ರವಾರ ಸಂಚಾರಕ್ಕೆ ಬೇಕಾಗುವ ರೀತಿಯಲ್ಲಿ ರೈಲ್ವೆ ಸೇತುವೆ ತೆರವು ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಎರಡು ಜೆಸಿಬಿಗಳ ಮೂಲಕ ಸೇತುವೆಯಲ್ಲಿ ತುಂಬಿದ್ದ ಮಣ್ಣು ತೆರವು ಮಾಡಿ ಪಾದಚಾರಿಗಳು, ಬೈಕ್ ಸವಾರರು ಹಾಗೂ ಲಘುವಾಹನಗಳು ಸಂಚಾರಕ್ಕೆ ಅನುವು ಮಾಡಿಕೊಡುವ ರೀತಿಯಲ್ಲಿ ಮಾಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿಯೇ ಸಂಚಾರ ಸುಗಮವಾಗಲಿದೆ.ಶೀಘ್ರ ಕಾಮಗಾರಿ ಪೂರ್ಣ: ಈಗ ತಾತ್ಕಾಲಿಕವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.ನಿಯಮಾನುಸಾರ ಮಾಡಬೇಕಾದ ಭೂಸ್ವಾಧೀನ ಪ್ರಕ್ರಿಯೇ ಶೀಘ್ರದಲ್ಲಿಯೇ ಪ್ರಾರಂಭವಾಗುವ ಸಾಧ್ಯತೆ ಇದೆ.
ಭೂ ಸ್ವಾಧೀನ ಪ್ರಕ್ರಿಯೆಗೆ ಜಿಲ್ಲಾಡಳಿತ ಪ್ರಸ್ಥಾವನೆ ಕಳುಹಿಸಿದ್ದು, ರೈಲ್ವೆ ಇಲಾಖೆಯಲ್ಲಿಯೂ ಈ ಕುರಿತು ಬೆಳವಣಿಗೆ ನಡೆದಿವೆ. ಹೀಗಾಗಿ, ರೈಲ್ವೆ ಗೇಟ್ ಸೇತುವೆ 63ರ ಬಹುದೊಡ್ಡ ಸಮಸ್ಯೆ ತಾತ್ಕಾಲಿಕವಾಗಿ ಇತ್ಯರ್ಥವಾಗಿದ್ದು, ಜನರು ನಿಟ್ಟುಸಿರು ಬಿಡುವಂತೆ ಆಗಿದ್ದರೇ ಪೂರ್ಣಪ್ರಮಾಣದ ಪರಿಹಾರ ದೊರೆಯುವ ಲಕ್ಷಣ ಕಾಣಲಾರಂಭಿಸಿವೆ.ಹೋರಾಟಕ್ಕೆ ಸಂದ ಜಯ:ಸೇತುವೆ ನಿರ್ಮಾಣಕ್ಕಾಗಿ ಕಳೆದ 8 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಈಗ ಸೇತುವೆ ನಿರ್ಮಾಣವಾದ ಮೇಲೆ ಸಂಚಾರಕ್ಕೆ ಮುಕ್ತ ಮಾಡುವಂತೆಯೂ ಹೋರಾಟ ಮಾಡಲಾಗಿದ್ದು, ಈ ಹೋರಾಟಕ್ಕೆ ಆರಂಭಿಕ ಜಯ ದೊರೆತಂತಾಗಿದೆ ಎನ್ನುತ್ತಾರೆ ಸ್ಥಳೀಯರ.
ಜನರಿಗೆ ಅನುಕೂಲವಾಗುವ ರೀತಿಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಹೇಳಿ ತುರ್ತಾಗಿ ತೆರವು ಮಾಡಿ ಸಂಚಾರಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದ್ದು, ಕಾಮಗಾರಿ ಪ್ರಾರಂಭವಾಗಿದೆ. ಉಳಿದಂತೆ ಆಗಬೇಕಾಗಿರುವ ಸ್ವಾಧೀನ ಪ್ರಕ್ರಿಯೆಗೂ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಸಮ್ಮತಿ ಪಡೆಯಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.ಕೊನೆಗೂ ನಮ್ಮ ಹೋರಾಟಕ್ಕ ತಾತ್ಕಾಲಿಕ ಪರಿಹಾರ ದೊರೆಯುವ ಲಕ್ಷಣ ಕಾಣುತ್ತಿವೆ. ಈಗ ಮುಚ್ಚಿದ್ದ ಸೇತುವೆ ತೆರವು ಮಾಡುವ ಕಾರ್ಯ ನಡೆಸಿದ್ದು, ಏನು ಮಾಡುತ್ತಾರೆ ಎಂದು ಕಾದು ನೋಡುತ್ತಿದ್ದೇವೆ ಎಂದು ರೈಲ್ವೆ ಗೇಟ್ 63 ಹೋರಾಟ ಸಮಿತಿ ಅಧ್ಯಕ್ಷರು ಬಸವರಾಜ ಬನ್ನಿಮಠ ತಿಳಿಸಿದ್ದಾರೆ.