ಪಾಂಡವಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ಬೆ.9.30ರಿಂದ 1.30ರವರೆಗೆ ಯಾವುದೇ ರೈಲುಗಾಡಿಗಳು ಇಲ್ಲ. ಈ ಮಧ್ಯೆದಲ್ಲಿ 11.45ಕ್ಕೆ ಮೈಸೂರಿನಿಂದ ಬರುವ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ರೈಲ್ವೆ ಮತ್ತು ಜಲಶಕ್ತಿ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಅವರು ಗುರುವಾರ ಪಟ್ಟಣ ಸಮೀಪದ ರೈಲ್ವೆ ನಿಲ್ದಾಣದಲ್ಲಿ ರೈಲು ಮಾರ್ಗ ವಿಂಡೋ ಟ್ರೈಲಿಂಗ್ ಪರಿವೀಕ್ಷಣೆ ನಡೆಸಿದರು.

ಮಧ್ಯಾಹ್ನ 2 ಗಂಟೆಗೆ ವಿಶೇಷ ರೈಲಿನಲ್ಲಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಆಗಮಿಸಿ ರೈಲಿನಿಂದ ಕೆಳಗಿಳಿದಾಗ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅವರಿಗೆ ಹೂ ಹಾರ ಹಾಕಿ ಜೈಕಾರ ಹಾಕಿದರು. ಸಾರ್ವಜನಿಕರು ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯ ಹಾಗೂ ಕೆಲವು ರೈಲುಗಾಡಿಗಳ ನಿಲುಗಡೆಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಎಸ್ಕಲೇಟರ್ ಅಳವಡಿಕೆ, ಹೈಟೆಕ್ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಮನವಿ ಮಾಡಿಕೊಂಡರು.

ಪಾಂಡವಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ಬೆ.9.30ರಿಂದ 1.30ರವರೆಗೆ ಯಾವುದೇ ರೈಲುಗಾಡಿಗಳು ಇಲ್ಲ. ಈ ಮಧ್ಯೆದಲ್ಲಿ 11.45ಕ್ಕೆ ಮೈಸೂರಿನಿಂದ ಬರುವ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿಕೊಡಬೇಕು ಎಂದು ಕೋರಿದರು.

ಪಾಂಡವಪುರದಿಂದ ಮೈಸೂರಿಗೆ ಪ್ರಯಾಣಿಸಲು ಬೆಳಿಗ್ಗೆ 9.15ರಿಂದ ಮಧ್ಯಾಹ್ನ 2ರವರೆಗೆ ಯಾವುದೇ ರೈಲು ಇಲ್ಲ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಧ್ಯಾಹ್ನ 1.30ರ ರಾಜ್ಯ ರಾಣಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ನಿಲುಗಡೆ ಮಾಡಿಕೊಡಬೇಕು. ಅಲ್ಲದೇ, ಕೊಚಿವೇಲಿ, ಮೈಲಾಡತುರೈ ಹಾಗೂ ಬೆಂಗಳೂರಿನಿಂದ ರಾತ್ರಿ ಸಂಚಾರ ಮಾಡಲಿರುವ ಮಂಗಳೂರು ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲುಗಾಡಿಗಳನ್ನು ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಸಚಿವಧ್ಚಯರಲ್ಲಿ ಮನವಿ ಮಾಡಿದರು.

ಪಾಂಡವಪುರ ರೈಲ್ವೆ ನಿಲ್ದಾಣದಿಂದ ಪಾಂಡವಪುರ ತಾಲೂಕು ಹಾಗೂ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ, ಚನ್ನರಾಯಪಟ್ಟಣ ತಾಲೂಕಿನ ಜನತೆಗೆ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರ ಆರತಿ ಉಕ್ಕಡದ ಅಹಲ್ಯಾ ದೇವಸ್ಥಾನಕ್ಕೆ ಬರುವ ಜನರಿಗೆ ರೈಲು ಗಾಡಿಗಳ ನಿಲುಗಡೆಯಿಂದಾಗಿ ಬಹಳ ಅನುಕೂಲವಾಗಲಿದೆ. ಜತೆಗೆ ರೈಲ್ವೆ ಇಲಾಖೆಗೂ ಹೆಚ್ಚಿನ ಆದಾಯವಾಗಲಿದೆ ಎಂದು ಕೋರಿದರು.

ನೂಕುನುಗ್ಗಲು, ಜೈಕಾರಕ್ಕೆ ಮೀಸಲಾದ ವೀಕ್ಷಣೆ ಕಾರ್ಯಕ್ರಮ:

ಸಚಿವರಿಗೆ ಹಾರ-ತುರಾಯಿ ಹಾಗೂ ಜೈಕಾರ ಘೋಷಣೆ ಹಾಕಲು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದರು. ಇದರಿಂದಾಗಿ ನೂಕುನುಗ್ಗಲು ಉಂಟಾಯಿತು. ಸಚಿವರಿಗೆ ಅಹವಾಲು ನೀಡಲು ಬಂದಿದ್ದ ಹಲವು ಸಾರ್ವಜನಿಕರಿಗೆ ಮನವಿ ಸಲ್ಲಿಸಲು ಸಾಧ್ಯವಾಗದೆ ಹಿಂದಿರುಗಿದರು. ಸಚಿವರಿಗೆ ಸ್ಥಳೀಯರು ಹಾಗೂ ಲಾರಿ ಮಾಲೀಕರ ಸಂಘದವರು ಅಭಿನಂದನೆ ಸಲ್ಲಿಸಿ ಹಲವು ಮನವಿ ನೀಡಿದರು. ಮನವಿ ಸ್ವೀಕರಿಸಿದ ಸಚಿವರು ಅಲ್ಲಿಂದ ಶ್ರೀರಂಗಪಟ್ಟಣ ತಾಲೂಕಿನ ಕಡೆಗೆ ತೆರಳಿದರು.

ಈ ವೇಳೆ ಮೈಸೂರು-ಕೊಡಗು ಸಂಸದ ಯದುವೀರ್ ದತ್ತ ಒಡೆಯರ್, ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜೆಡಿಎಸ್ ಜಿಲ್ಲಾ ಆಧ್ಯಕ್ಷ ಡಿ.ರಮೇಶ್, ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಎಸ್.ಎನ್ ಟಿ.ಸೋಮಶೇಖರ್, ಕೆ.ಎಲ್.ಆನಂದ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸಕೋಟೆ ಪುಟ್ಟಸ್ವಾಮಿಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ, ಟೌನ್ ಅಧ್ಯಕ್ಷ ಎನ್.ಸೋಮಶೇಖರ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳ ನವೀನ್ ಇತರರು ಇದ್ದರು.

ದೊಡ್ಡಬ್ಯಾಡರಹಳ್ಳಿ ಸುತ್ತಮುತ್ತಲ ಗ್ರಾಮಸ್ಥರಿಂದ ಮನವಿ ಸಲ್ಲಿಕೆ

ಪಾಂಡವಪುರ:

ತಾಲೂಕಿನ ದೊಡ್ಡಬ್ಯಾಡರಹಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಅವರಿಗೆ ದೊಡ್ಡಬ್ಯಾಡರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಿರುಪತಿ ಎಕ್ಸ್‌ಪ್ರೆಸ್ ಹಾಗೂ ತಾಳಗೊಪ್ಪ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡುವಂತೆ ಮನವಿ ಮಾಡಿದರು.

ಜತೆಗೆ ದೊಡ್ಡಬ್ಯಾಡರಹಳ್ಳಿಯ ಬಳಿ ಓವರ್ ಬ್ರಡ್ಜ್ ನಿರ್ಮಾಣ, ಸ್ವೇಷನ್ ಬಳಿ ರೈತರು ಜಮೀನಿಗೆ ಓಡಾಡಲು ಅಂಡರ್ ಪಾಸ್ ರಸ್ತೆ ಹಾಗೂ ತಾಳಶಾಸನದ ಬಳಿ ಜಮೀನಿಗೆ ರೈತರು ಓಡಾಡಲು ಅಂಡರ್ ಪಾಸ್ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.