ಅತ್ಯುತ್ತಮ ಕೆಲಸ ಗುರುತಿಸಲು ರೈಲ್ವೆ ಸಪ್ತಾಹ ಆಚರಣೆ

| Published : Jan 24 2024, 02:00 AM IST

ಸಾರಾಂಶ

ಮುಂದಿನ ದಿನಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಪ್ರಯತ್ನಿಸಲು ನೈರುತ್ಯ ರೈಲ್ವೆಯ ಎಲ್ಲ ಸದಸ್ಯರು ತಮ್ಮನ್ನು ತಾವು ಪುನಃ ಸಮರ್ಪಿಸಿಕೊಳ್ಳಬೇಕು ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.

ಹುಬ್ಬಳ್ಳಿ: ನೈರುತ್ಯ ರೈಲ್ವೆ ಘಟಕಗಳ ಸಿಬ್ಬಂದಿ ಕೈಗೊಳ್ಳುವ ಅತ್ಯುತ್ತಮ ಕೆಲಸ ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಪ್ರತಿವರ್ಷವೂ ರೈಲ್ವೆ ಸಪ್ತಾಹ ಆಚರಿಸುತ್ತ ಬರಲಾಗುತ್ತಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹೇಳಿದರು.

ಮಂಗಳವಾರ ಗದಗ ರಸ್ತೆಯಲ್ಲಿರುವ ಚಾಲುಕ್ಯ ರೈಲ್ವೆ ಇನ್ಸಿಟಿಟ್ಯೂಟ್‌ನಲ್ಲಿ ನೈಋತ್ಯ ರೈಲ್ವೆಯು ವಿಶಿಷ್ಟ ರೈಲು ಸೇವೆ, ರೈಲು ಸೇವಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಪುರಸ್ಕೃತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆಯ ಪ್ರಮುಖ ಕಾರ್ಯನಿರ್ವಹಣೆಯ ಮುಖ್ಯಾಂಶಗಳನ್ನು ವಿವರಿಸಿ, ಮುಂದಿನ ದಿನಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಪ್ರಯತ್ನಿಸಲು ನೈರುತ್ಯ ರೈಲ್ವೆಯ ಎಲ್ಲ ಸದಸ್ಯರು ತಮ್ಮನ್ನು ತಾವು ಪುನಃ ಸಮರ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಹಿಂದಿನ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2022-23ನೇ ಸಾಲಿನ ದಕ್ಷತೆಯ ಶೀಲ್ಡ್ ಅನ್ನು ಬೆಂಗಳೂರು ವಿಭಾಗ ಪಡೆದುಕೊಂಡರೆ, ಅತ್ಯುತ್ತಮ ನಿರ್ವಹಣೆಯ ನಿಲ್ದಾಣವನ್ನು (ಪ್ರಮುಖ) ಮೈಸೂರು ವಿಭಾಗದ ಮೈಸೂರು ರೈಲು ನಿಲ್ದಾಣ ಮತ್ತು ಅತ್ಯುತ್ತಮ ರೈಲು ನಿಲ್ದಾಣ (ಮೈನರ್) ಮೈಸೂರು ವಿಭಾಗದ ಬಾಗೇಶಪುರ ರೈಲು ನಿಲ್ದಾಣ ಪಡೆಯಿತು. ಸಿಬ್ಬಂದಿ ತರಬೇತಿಯಲ್ಲಿ ಮೈಸೂರು ಕಾರ್ಯಾಗಾರ ಅತ್ಯುತ್ತಮ ಸಾಧನೆ ಮಾಡಿದೆ.

ಇದೇ ವೇಳೆ ವಲಯ ಮಟ್ಟದಲ್ಲಿ 37 ರೈಲ್ವೆ ಸಿಬ್ಬಂದಿಗೆ ವಿಶಿಷ್ಟ ರೈಲು ಸೇವಾ ಪುರಸ್ಕಾರ ಹಾಗೂ 21 ರೈಲು ಸಿಬ್ಬಂದಿಗಳಿಗೆ ರೈಲ್ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.