ಬೆಡ್‌ಲೈನ್‌ ಸೆಟ್‌ ಸ್ವಚ್ಛತೆಗೆ ರೈಲ್ವೆ ಹೆಚ್ಚಿನ ಆದ್ಯತೆ: ರಾಧಾ ರಾಣಿ

| Published : Dec 01 2024, 01:31 AM IST

ಬೆಡ್‌ಲೈನ್‌ ಸೆಟ್‌ ಸ್ವಚ್ಛತೆಗೆ ರೈಲ್ವೆ ಹೆಚ್ಚಿನ ಆದ್ಯತೆ: ರಾಧಾ ರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ರೇಲ್ವೆ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್‌ ಸೇರಿದಂತೆ ಇತರೆ ಬೆಡ್‌ಲೈನ್‌ಗಳ ಶುಚಿತ್ವಕ್ಕೆ ಭಾರತೀಯ ರೈಲ್ವೆ ಹೆಚ್ಚಿನ ಆದ್ಯತೆ ನೀಡಿದೆ ರಾಧಾ ರಾಣಿ ತಿಳಿಸಿದರು

ಹುಬ್ಬಳ್ಳಿ: ರೈಲ್ವೆಯ ಮೊದಲ, ದ್ವಿತೀಯ ಹಾಗೂ ತೃತೀಯ ದರ್ಜೆಯ ಎಸಿ ಬೋಗಿಗಳ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್‌ ಸೇರಿದಂತೆ ಇತರೆ ಬೆಡ್‌ಲೈನ್‌ಗಳ ಶುಚಿತ್ವಕ್ಕೆ ಭಾರತೀಯ ರೈಲ್ವೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಧಾ ರಾಣಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲಿನಿಂದಲೂ ರೈಲ್ವೆಯಲ್ಲಿ ಪ್ರಯಾಣಿಸುವ ಮೊದಲ, ದ್ವಿತೀಯ ಹಾಗೂ ತೃತೀಯ ದರ್ಜೆ ಎಸಿ ಬೋಗಿಗಳ ಪ್ರಯಾಣಿಕರಿಗೆ 2010ರಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬ್ಲಾಂಕೆಟ್‌ ಸ್ವಚ್ಛಗೊಳಿಸಲಾಗುತ್ತಿತ್ತು. ಇದನ್ನು 2016ರಲ್ಲಿ 2 ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವ ನಿಯಮ ತರಲಾಯಿತು. 2018ರ ನಂತರ 15 ದಿನಗಳಿಗೊಮ್ಮೆ ಒಂದು ಬಾರಿ ಬ್ಲಾಂಕೆಟ್ ತೊಳೆಯಬೇಕು. ಚಳಿಗಾಲ ಅಥವಾ ಬ್ಲಾಂಕೆಟ್‌ನ ಸಮರ್ಪಕ ಪೂರೈಕೆ ಇರದಿದ್ದರೆ ಪ್ರತಿ ತಿಂಗಳಿಗೆ ಒಂದು ಬಾರಿಯಾದರೂ ತೊಳೆಯಲೇಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ ಎಂದರು.

ಬ್ಲಾಂಕೆಟ್, ಬೆಡ್‌ಶೀಟ್, ತಲೆದಿಂಬು, ತಲೆದಿಂಬಿನ ಕವರ್, ಕೈ ವಸ್ತ್ರಗಳನ್ನು ಪ್ರಯಾಣಿಕರಿಗೆ ಕಡ್ಡಾಯವಾಗಿಯೇ ಶೀಲ್ಡ್‌ ಮಾಡಿದ ಕವರ್‌ನಲ್ಲಿ ನೀಡಲಾಗುತ್ತದೆ. ಅಲ್ಲದೇ ಪ್ರತಿಯೊಂದು ಶೀಲ್ಡ್‌ ಕವರ್‌ಗಳಿಗೆ 8 ಸಂಖ್ಯೆಯ ಕೋಡ್‌ ಸಹ ನೀಡಲಾಗಿರುತ್ತದೆ. ಬ್ಲಾಂಕೆಟ್ ಹೊರತುಪಡಿಸಿ ಇನ್ನುಳಿದ ಸಲಕರಣೆಗಳನ್ನು ನಿತ್ಯವೂ ತೊಳೆಯಲಾಗುತ್ತದೆ. ಈ ಮೊದಲು ಪ್ರತಿ ಬ್ಲಾಂಕೆಟ್ ಅನ್ನು 4 ವರ್ಷಕ್ಕೆ ಒಮ್ಮೆ ಬದಲಾಯಿಸಲಾಗುತ್ತಿತ್ತು. ಇದೀಗ, ಪ್ರತಿ 2 ವರ್ಷಕ್ಕೊಮ್ಮೆ ಬ್ಲಾಂಕೆಟ್ ಬದಲಾಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರತ್ಯೇಕ ಮೆಕಾನೈಸ್‌ ಲಾಡ್ರಿ

ಭಾರತೀಯ ರೈಲ್ವೆಯಲ್ಲಿ ಒಟ್ಟು 43 ಕಡೆಗಳಲ್ಲಿ ಇಲಾಖೆಯ ಲಾಂಡ್ರಿಗಳಿದ್ದರೆ, 24 ಬೂತ್‌ಗಳಲ್ಲಿ ಹಾಗೂ ಹೊರಗುತ್ತಿಗೆಯಲ್ಲಿ 48 ಕಡೆಗಳಲ್ಲಿ ಲಾಂಡ್ರಿಗಳಿವೆ. ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ತಲಾ ಒಂದೊಂದು ಮೆಕಾನೈಸ್‌ ಲಾಂಡ್ರಿಗಳಿವೆ. ಹುಬ್ಬಳ್ಳಿ ಹಾಗೂ ಮೈಸೂರು ರೈಲ್ವೆ ವಿಭಾಗದಲ್ಲಿ ತಲಾ 3.5 ಟನ್‌ ಮತ್ತು ಬೆಂಗಳೂರು ರೈಲ್ವೆ ವಿಭಾಗದಲ್ಲಿ 10 ಟನ್‌ ಸಾಮರ್ಥ್ಯದ ಮೆಕಾನೈಸ್ ಲಾಂಡ್ರಿಗಳಿವೆ. ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಪ್ರತಿದಿನ 7 ಸಾವಿರ ಬೆಡ್‌ಶೀಟ್, 3,500 ತಲೆದಿಂಬಿನ ಕವರ್‌ಗಳು, 3,500 ಕೈ ವಸ್ತ್ರ ಹಾಗೂ 100 ವುಲನ್ ಬ್ಲಾಂಕೆಟ್‌ಗಳನ್ನು ಶುಚಿಗೊಳಿಸಲಾಗುತ್ತದೆ ಎಂದರು.