ಕೊಡಗು ಜಿಲ್ಲೆಯಾದ್ಯಂತ ಮಳೆ: ಇಂದು-ಶಾಲಾ ಕಾಲೇಜಿಗೆ ರಜೆ

| Published : Dec 03 2024, 12:33 AM IST

ಸಾರಾಂಶ

ಚಂಡ ಮಾರುತದ ಪರಿಣಾಮ ಕೊಡಗು ಜಿಲ್ಲೆಗೆ ತಟ್ಟಿದೆ. ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಫೆಂಗಲ್ ಚಂಡ ಮಾರುತದ ಪರಿಣಾಮ ಕೊಡಗು ಜಿಲ್ಲೆಗೂ ತಟ್ಟಿದ್ದು, ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಮಳೆ ಸುರಿಯಿತು.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ವಿರಾಜಪೇಟೆ, ನಾಪೋಕ್ಲು, ಸಿದ್ದಾಪುರ, ಕುಶಾಲನಗರ, ಸೋಮವಾರಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಯಿತು.

ಮಳೆ ಜೊತೆಗೆ ತೀವ್ರ ಚಳಿ ಗಾಳಿ ಹಿನ್ನೆಲೆ ಜನರು ಪರದಾಡುವಂತಾಯಿತು.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ ಇರುವುದರಿಂದ ಮಂಗಳವಾರ ಬೆಳಗ್ಗೆ 8.30ರ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 200 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿಯುವ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಫೆಂಗಲ್ ಚಂಡಮಾರುತದಿಂದಾಗಿ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊರತುಪಡಿಸಿ ಉಳಿದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ಹೊರಡಿಸಿದ್ದಾರೆ.