ತಾಲೂಕಿನಾದ್ಯಂತ ಮಳೆ: ಧರೆಗಿಳಿದ ಮರ, ವಿದ್ಯುತ್ ಕಂಬ

| Published : May 19 2024, 01:51 AM IST

ಸಾರಾಂಶ

ಕಳೆದ ಒಂದೆರೆಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ದಬ್ಬೇಘಟ್ಟ ಹೋಬಳಿಯಲ್ಲಿ ಶುಕ್ರವಾರ ರಾತ್ರಿ 9.6 ಮಿಮೀ ಮಳೆಯಾಗಿದೆ. ಕಸಬಾ, ಮಾಯಸಂದ್ರ ಮತ್ತು ದಂಡಿನಶಿವರ ಹೋಬಳಿಗಳಿಗೆ ಭರಣಿ ಮತ್ತು ಕೃತಿಕ ಮಳೆ ಉತ್ತಮವಾಗಿ ಆರಂಭವಾದರೂ ದಬ್ಬೇಘಟ್ಟ ಹೋಬಳಿಗೆ ಒಂದು ಹನಿ ಕೂಡ ಬಿದ್ದಿರಲಿಲ್ಲ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕಳೆದ ಒಂದೆರೆಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ದಬ್ಬೇಘಟ್ಟ ಹೋಬಳಿಯಲ್ಲಿ ಶುಕ್ರವಾರ ರಾತ್ರಿ 9.6 ಮಿಮೀ ಮಳೆಯಾಗಿದೆ. ಕಸಬಾ, ಮಾಯಸಂದ್ರ ಮತ್ತು ದಂಡಿನಶಿವರ ಹೋಬಳಿಗಳಿಗೆ ಭರಣಿ ಮತ್ತು ಕೃತಿಕ ಮಳೆ ಉತ್ತಮವಾಗಿ ಆರಂಭವಾದರೂ ದಬ್ಬೇಘಟ್ಟ ಹೋಬಳಿಗೆ ಒಂದು ಹನಿ ಕೂಡ ಬಿದ್ದಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಈ ಹೋಬಳಿಯ ಮಾವಿನಕೆರೆ, ಮುತ್ತುಗದಹಳ್ಳಿ, ದಬ್ಬೇಘಟ್ಟ, ಮುತ್ತಗದಹಳ್ಳಿ, ಮುದ್ದನಹಳ್ಳಿ, ಕೆ.ಹೊಸೂರು, ಮಾವಿನಹಳ್ಳಿ, ಕಳ್ಳನಕೆರೆ, ಹುಲಿಕಲ್, ಗೂರಲಮಠ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.

ಮಾಯಸಂದ್ರ ಹೋಬಳಿಯ ಭೈತರಹೊಸಹಳ್ಳಿ, ಶೆಟ್ಟಿಗೊಂಡನಹಳ್ಳಿ, ಮಣೆಚೆಂಡೂರು, ವಡವನಘಟ್ಟ ಮತ್ತು ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7.4 ಮಿಮೀ ಮಳೆಯಾಗಿದೆ. ದಂಡಿನಶಿವರ ಹೋಬಳಿಯ ಸಂಪಿಗೆ, ಮಾಸ್ತಿಗೊಂಡನಹಳ್ಳಿ, ಸಂಪಿಗೆಹೊಸಹಳ್ಳಿ, ಹುಲ್ಲೇಕೆರೆ, ದಂಡಿನಶಿವರ ಮತ್ತು ಅಮ್ಮಸಂದ್ರದಲ್ಲಿ ಸಾಧಾರಣ ಮಳೆಯಾಗಿದೆ.

ಮಳೆ ಇಲ್ಲದೆ ಸೊರಗಿದ್ದ ವಾಣಿಜ್ಯ ಬೆಳೆಗಳು ಸತತ ಮಳೆಯಿಂದ ತೆಂಗು, ಬಾಳೆ, ಅಡಿಕೆ ಬೆಳೆ ಹಸಿರಾಗಿವೆ. ಕೆಲ ಭಾಗಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಪ್ರಾಣಿ ಪಕ್ಷಿಗಳಿಗೆ ನೀರಿನ ಆಸರೆಯಾಗಿದೆ. ರಾತ್ರಿ 8 ಗಂಟೆಗೆ ಪ್ರಾರಂಭವಾದ ಮಳೆ ಸುಮಾರು 12 ಗಂಟೆಯವರೆಗೂ ಸುರಿದಿದೆ. ಪೂರ್ವ ಮುಂಗಾರು ಬಿತ್ತನೆಗೆ ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ದವಾಗಿದ್ದರು. ಆದರೆ ರಾತ್ರಿ ಸುರಿದ ಮಳೆಯಿಂದ ಕೆಲ ರೈತರಿಗೆ ಹೆಸರು ಮತ್ತು ಅಲಸಂದೆ ಬಿತ್ತನೆಗೆ ಹಿನ್ನೆಡೆಯಾಗಿದ್ದರೆ, ಕೆಲ ಕಡೆ ಬಿತ್ತನೆ ಕೂಡ ಆಗಿದೆ.

ಮನೆ ಮೇಲೆ ಮುರಿದು ಬಿದ್ದ ವಿದ್ಯುತ್‌ ಕಂಬ: ದಬ್ಬೇಘಟ್ಟ ಹೋಬಳಿ ವ್ಯಾಪ್ತಿ ಬಿರುಗಾಳಿಗೆ ಕೆ.ಹೊಸೂರಿನ ಮನೆಯೊಂದರ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಕಳ್ಳನಕೆರೆ, ಹುಲಿಕಲ್, ಗೂರಲಮಠ, ಅಕ್ಕವನಕಟ್ಟೆ, ದಂಡಿನಶಿವರ ಹೋಬಳಿ, ಕಸಬಾ ಹೋಬಳಿಯಲ್ಲಿ ವಿದ್ಯುತ್ ಕಂಬ ಮುರಿದಿವೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಸಿ.ರಾಜಶೇಖರ್ ತಿಳಿಸಿದ್ದಾರೆ.ಬೀದರ್ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಮರ: ಕಸಬಾ ವ್ಯಾಪ್ತಿಯ ಲೋಕಮ್ಮನಹಳ್ಳಿ ಗೇಟ್ ಬಳಿಯ ಶ್ರೀರಂಗಪಟ್ಟಣ ಮತ್ತು ಬೀದರ್ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು, ಕೆಲವೊತ್ತು ಸಂಚಾರ ಅಸ್ಥವ್ಯಸ್ಥವಾಗಿತ್ತು. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ತೆರವುಗೊಳಿಸಿದ್ದಾರೆ.