ಇಂಥ ಸಮಯದಲ್ಲಿ ಸಾಲ ಬಾಧೆ, ಫಸಲು ಉಳಿಸಿಕೊಳ್ಳಲು ಆಗುತ್ತಿಲ್ಲ. ಜೊತೆಗೆ ಇತ್ತೀಚಗೆ ಹೊಸದಾಗಿ ಬೋರ್ ಕೊರೆದರೂ ನೀರು ಬರದೆ ಇದ್ದ ಕಾರಣ ಮನನೊಂದ ತಾಲೂಕಿನ ಕಲೀಗೌಡನಹಳ್ಳಿ ಗ್ರಾಮದ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ನಾಲ್ಕು ತಿಂಗಳಿನಿಂದ ಸಮರ್ಪಕ ಮಳೆ ಬೀಳಲಿಲ್ಲ. ತಾಲೂಕಿನಾದ್ಯಂತ ಅಂತರ್ಜಲ ಕುಸಿತಗೊಂಡಿದೆ. ಮಳೆ ಬೀಳದ ಬಿತ್ತನೆ ಮಾಡಿದ ಫಸಲು ರೈತರ ಕೈ ಸೇರದೆ ತೀವ್ರ ಬರ ಬಂದ ಕಾರಣ ರಾಜ್ಯ ಸರ್ಕಾರ ಎಚ್ಚೆತ್ತು ಗುಂಡ್ಲುಪೇಟೆ ತಾಲೂಕನ್ನು ತೀವ್ರ ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಇಂಥ ಸಮಯದಲ್ಲಿ ಸಾಲ ಬಾಧೆ, ಫಸಲು ಉಳಿಸಿಕೊಳ್ಳಲು ಆಗುತ್ತಿಲ್ಲ. ಜೊತೆಗೆ ಇತ್ತೀಚಗೆ ಹೊಸದಾಗಿ ಬೋರ್ ಕೊರೆದರೂ ನೀರು ಬರದೆ ಇದ್ದ ಕಾರಣ ಮನನೊಂದ ತಾಲೂಕಿನ ಕಲೀಗೌಡನಹಳ್ಳಿ ಗ್ರಾಮದ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.ಕಲೀಗೌಡನಹಳ್ಳಿ ಗ್ರಾಮದ ಯುವ ರೈತ ಮಣಿಕಂಠ (24) ಕಳೆದ ಸೆ.18 ರಂದು ತಮ್ಮ ಜಮೀನಿನಲ್ಲಿ ಬೆಳೆಗೆ ಸಿಂಪಡಿಸಲು ತಂದಿಟ್ಟಿದ್ದ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಮೃತ ಮಣಿಕಂಠನ ತಂದೆ ಶಿವಣ್ಣ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಸಾವಿಗೆ ಸಾಲ, ಫಸಲು ಒಣಗಿದ್ದು, ೨ ಬೊರ್ ಕೊರೆಸಿ ನೀರು ಬರದೆ ಇದ್ದುದ್ದು, 16 ಲಕ್ಷ ರು. ಸಾಲದ ಕಾರಣ ಖಿನ್ನತೆಗೆ ಒಳಗಾಗಿದ್ದ ಮಣಿಕಂಡ ವಿಷ ಸೇವಿಸಿ ಇಹಲೋಕ ತ್ಯಜಿಸಿದ್ದಾರೆ.ಮೃತ ರೈತ ಮಣಿಕಂಠನಿಗೆ ಕೃಷಿಯಲ್ಲಿ ಆಸಕ್ತಿ ಇತ್ತು. ಈ ಕಾರಣದಿಂದಲೇ ಆಲೂಗಡ್ಡೆ, ಅರಿಶಿನ, ಬೆಳ್ಳುಳ್ಳಿ ಬಿತ್ತನೆ ಮಾಡಿದ್ದ. ಅಂತರ್ಜಲ ಕುಸಿತದಿಂದ ಬೊರ್‌ನಲ್ಲಿ ನೀರು ಕಡಿಮೆಯಾಗುತ್ತಿತ್ತು.ಇದನ್ನು ಕಂಠ ಮೃತ ಮಣಿಕಂಠ, ‘ನನ್ನ ಕಣ್ಣಿಂದ ಒಣಗಿದ ಫಸಲು ನೋಡಲಾಗುವುದಿಲ್ಲ, ಸಾಯಬೇಕು’ ಎಂದು ಕುಟುಂಬದವರ ಜತೆ ಹೇಳುತ್ತಿದ್ದ ಎನ್ನಲಾಗಿದೆ.
ಮೃತನ ತಂದೆ ಶಿವಣ್ಣ ನೀಡಿದ ದೂರಿನಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷ ಸಂಹಿತೆ ಪ್ರಕಾರ ಯು/ಎಸ್-೧೯೪ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಕೃಷಿ ಸಹಾಯಕ ಇಲಾಖೆ ನೌಕರ ಮೂರ್ತಿ ಸ್ಥಳಕ್ಕಾಗಮಿಸಿ,ರಾಜ್ಯ ಸರ್ಕಾರದಿಂದ ದೊರೆಯುವ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತನ ಅಂತ್ಯಕ್ರಿಯೆ ನೆರವೇರಿತು.
ಏನಿದು ಘಟನೆ?:ಸೆ.18ರ ಬೆಳಿಗ್ಗೆ 10.30 ರ ಸಮಯದಲ್ಲಿ ಮೃತನ ತಾಯಿ ನಾಗಮ್ಮ ಜಮೀನಿನಲ್ಲಿ ಕಳೆ ಕೀಳುತ್ತಿದ್ದರು. ಆ ಸಮಯದಲ್ಲಿ ಮಣಿಕಂಠ ಜಮೀನಿನಲ್ಲಿದ್ದ ಕ್ರೀಮಿನಾಶ ಸೇವಿಸಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದುದನ್ನು ಮೃತನ ತಾಯಿ ನಾಗಮ್ಮ ಕಂಡಿದ್ದಾರೆ.
ನೆರೆಯ ಜಮೀನಿನಲ್ಲಿದ್ದ ರೈತ ಬೀರೇಶನನ್ನು ನಾಗಮ್ಮ ಕೂಗಿದ್ದಾರೆ. ಬಳಿಕ ಬೀರೇಶ್ ಮೃತನ ತಂದೆ ಶಿವಣ್ಣನಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿದಾಗ ಕಾರಲ್ಲಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.ವೈದ್ಯರ ಸಲಹೆಯಂತೆ ಚಾಮರಾಜನಗರ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಮಣಿಕಂಠ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.