ಗುರುವಾರ ರಾತ್ರಿ ಸುರಿದ ಮಳೆ, ಭಾರೀ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು, ಮನೆ ಛಾವಣಿ ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಗುರುವಾರ ರಾತ್ರಿ ಸುರಿದ ಮಳೆ, ಭಾರೀ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು, ಮನೆ ಛಾವಣಿ ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ.ಶಾರದಾಳ, ಉದಗಟ್ಟಿ, ಕಲಾದಗಿ, ಖಜ್ಜಿಡೋಣಿ, ಮುರುನಾಳ ಗ್ರಾಮದಲ್ಲಿ ಅಪಾರ ಹಾನಿ ಉಂಟಾಗಿದೆ. ಶಾರದಾಳ ಗ್ರಾಮದ ದುಸ್ಯಂಗೆಪ್ಪ ಗಂಗಪ್ಪ ಕುರಿ ಎಂಬುವವರ ಮನೆಯ ಛಾವಣಿ ಹಾರಿ ಹೋಗಿ ಬಹುದೂರ ಬಿದ್ದಿದ್ದು, ಮನೆಯೊಳಗಿದ್ದ 24 ಚೀಲ ಗೋದಿ ಮಳೆಗೆ ಹಾನಿಯಾಗಿದೆ. ನಿಂಗಪ್ಪ ರಂಗಪ್ಪ ಕೊಕ್ಕನ್ನವರ ಮನೆಯ ಪಕ್ಕದ ಬೃಹತ್ ಬೇವಿನ ಮರದ ಕೊಂಬೆ ಮುರಿದು ಬಿದ್ದಿವೆ. ಬೃಹತ್ ಜಾಲಿ ಮರ ಉರುಳಿಬಿದ್ದು ನಿಂಗಪ್ಪ ಸೂಳಿಕೇರಿ ಹಾಗೂ ದ್ರಾಕ್ಷಾಯಣಿ ರಾಮ್ಕಿ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಛಾವಣಿ ಹಾರಿ ಕೆಂಚನಗೌಡ ಪಾಟೀಲ ಅವರ ಮನೆಯ ಮುಂದೆ ಬಿದ್ದಿದ್ದು, ಅವರ ಮನೆಯ ದನದ ಶೆಡ್ ತಗಡು ಹಾರಿ ಹೋಗಿವೆ. ಉದಗಟ್ಟಿ ಗ್ರಾಮದಲ್ಲಿ ಸುಭಾಸ ಜಕ್ಕನ್ನವರ ಮನೆಯ ಮುಂದಿನ ಮರ ಧರೆಗುರುಳಿದೆ, ಜೋರಾದ ಗಾಳಿಗೆ ಕಬ್ಬು ನೆಲಕ್ಕುರುಳಿ ಬೆಳೆ ಹಾನಿಯಾಗಿದೆ. ಮುರುನಾಳ ಗ್ರಾಮದಲ್ಲಿ ಗದಿಗೆಪ್ಪ ಮುರುನಾಳ ಎಂಬುವವರ ತೋಟದಲ್ಲಿ ಸಾಗವಾನಿ ಮರ, ತೆಂಗಿನ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಯಾವುದೇ ಪ್ರಣಾಪಾಯ ಸಂಭವಿಸಿಲ್ಲ, ಮನೆ ಹಾನಿ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸಂಜಯಕುಮಾರ ಕೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
-------------ಲೋಕಾಪುರ ಸುತ್ತಮುತ್ತಲು ಮಳೆಯಿಂದ ಅವಾಂತರ
ಲೋಕಾಪುರ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಹಲವು ಕಡೆ ಗಿಡಮರಗಳು ರಸ್ತೆಗೆ ಉರಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡು ಶುಕ್ರವಾರ ಮಧ್ಯಾಹ್ನದವರೆಗೆ ಸಾರ್ವಜನಿಕರು ಪರದಾಡಿದರು.ಹಲವು ಮನೆಗಳ ಛಾವಣೆ, ಅಂಗಡಿಗಳ ಬೋರ್ಡ್, ತಗಡಿನ ಶೆಡ್‌ಗಳು ಹಾರಿ ಹೋಗಿದ್ದು, ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.
ಪೋಲಿಸ್ ಸ್ಟೇಷನ್ ನಲ್ಲ ಅವಾಂತರ : ಪಟ್ಟಣದ ಪೋಲಿಸ್ ಸ್ಟೇಷನ್ ಒಳಗಡೆ ಮಳೆ ನೀರು ನುಗ್ಗಿ ಅವಂತಾರ ಸೃಷ್ಟಿಸಿತು. ರಾತ್ರಿಯಿಂದ ಬೆಳಗ್ಗೆಯವರೆಗೆ ಮಳೆ ನೀರು ಹೋರ ಹಾಕಲು ಪೋಲಿಸ್ ಸಿಬ್ಬಂದಿ ಹರಸಹಾಸಪಟ್ಟರು.ಕಚೇರಿಯ ದಾಖಲಾತಿಗಳ ಮತ್ತು ವಸ್ತುಗಳನ್ನು ಕೈಯಿಲ್ಲಿ ಹಿಡಿದು ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದು ಕಂಡು ಬಂತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೋಲಿಸರ ಕಚೇರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಡಿಕೊಂಡರು.
ಪ್ರತಿಬಾರಿ ಮಳೆಯಾದರೆ ಸಾಕು, ಪೋಲಿಸ್ ವಸತಿ ಗೃಹಗಳು ಮತ್ತು ಪೋಲಿಸ್ ಠಾಣೆ ನೀರಿನಲ್ಲಿ ನಿಲ್ಲುತ್ತಿದ್ದು,ವಸತಿ ಗೃಹಗಳ ಕಾಮಗಾರಿ ಪ್ರಾರಂಭವಾಗಿದ್ದು, ಶೀಘ್ರ ಪೋಲಿಸ್ ಕಚೇರಿ ಪುನರ್ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.