ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಬಿಸಿಲ ಬೇಗೆಯ ನಡುವೆ ಮಳೆ ಅಬ್ಬರಿಸಿ ಮಲೆನಾಡಿಗರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ವಿಶೇಷ ಪೂಜೆ ಮುಗಿಯು ವಷ್ಟರಲ್ಲೇ ಸುರಿದ ಭಾರೀ ಮಳೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆ ಮಲೆನಾಡು ಭಾಗದಲ್ಲಿ ಬಿಸಿಲ ಬೇಗೆಯ ನಡುವೆ ಮಳೆ ಅಬ್ಬರಿಸಿ ಮಲೆನಾಡಿಗರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬೇಸಿಗೆಯ ಬಿಸಿಲಿನಿಂದ ಬಳಲಿದವರಿಗೆ ಇದೀಗ ಮಳೆ ತಂಪೆರೆದಿದೆ. ಮಳೆಗಾಗಿ ನಡೆದ ವಿಶೇಷ ಪೂಜೆ ಮುಗಿಯು ವಷ್ಟರಲ್ಲೇ ಭಾರೀ ಮಳೆ ಸುರಿದ ಘಟನೆ ಭಕ್ತರಲ್ಲಿ ಆಶ್ಚರ್ಯ ಮತ್ತು ಸಂತಸ ಮೂಡಿಸಿದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ಭಾನುವಾರ ನಾಡಿನ ಸುವೃಷ್ಟಿಗಾಗಿ ವಿಶೇಷ ಪೂಜೆಗಳು ನಡೆಯಿತು. ಶತ ರುದ್ರಾಭಿಷೇಕ, ರುದ್ರಹೋಮ ಹಾಗೂ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜೆ ನಡೆಯುತ್ತಿದ್ದಂತೆಯೇ ಮಲೆನಾಡಿನ ಹಲವೆಡೆ ವರುಣ ದೇವ ಅಬ್ಬರಿಸಿದ್ದಾನೆ.

ಶೃಂಗೇರಿ, ಕಳಸ, ಎನ್.ಆರ್.ಪುರ, ಮುತ್ತೋಡಿ, ಹೊರನಾಡು, ಕುದುರೆಮುಖ ಹಾಗೂ ಹಿರೇಬೈಲ್ ಭಾಗಗಳಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿದಿದೆ. ಈ ಮಳೆಯಿಂದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರಿಗೆ ತಂಪು ದೊರೆತಿದೆ. ವಿಶೇಷವಾಗಿ ಕಾಫಿ ಮತ್ತು ಅಡಕೆ ಬೆಳೆಗಾರರಲ್ಲಿ ಈ ಮಳೆ ಹೊಸ ಆಶಾಭಾವನೆ ಮೂಡಿಸಿದೆ. ತೋಟಗಳಿಗೆ ನೀರು ಹಾಯಿಸಲು ಪರದಾಡುತ್ತಿದ್ದ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಕನಿಷ್ಠ 15 ದಿನಗಳವರೆಗೆ ತೋಟಗಳಿಗೆ ನೀರು ಹಾಕುವ ಅವಶ್ಯಕತೆ ಇಲ್ಲ ಎಂದು ಬೆಳೆಗಾರರು ಹೇಳುತ್ತಿದ್ದಾರೆ. ಚಿಕ್ಕಮಗಳೂರು ನಗರದಲ್ಲೂ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸಾಧಾರಣ ಮಳೆಯಾಗಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರಲ್ಲಿ ಈ ಮಳೆ ಸಂತಸ ತಂದಿದೆ. ಒಟ್ಟಾರೆ, ಕಾಫಿನಾಡ ಮಲೆನಾಡು ಭಾಗದಲ್ಲಿ ಸುರಿದ ಮಳೆ ಬೆಳೆಗಾರರಿಗೆ ನೆಮ್ಮದಿ ಮತ್ತು ಹೊಸ ನಿರೀಕ್ಷೆ ಮೂಡಿಸಿದೆ.

ನರಸಿಂಹರಾಜಪುರದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನ 4.30 ಯಿಂದ ಒಂದು ಗಂಟೆಗಳ ಕಾಲ ಗು ಡುಗು ಸಹಿತ ಮಳೆ ಯಾಗಿದೆ.

ಕೊಪ್ಪ, ಜಯಪುರ ಭಾಗಗಳಲ್ಲಿ 4,30 ರಿಂದ 40 ನಿಮಿಷಗಳ ಕಾಲ ಗುಡುಗಿನೊಂದಿಗೆ ಸಾಧಾರಣ ಮಳೆ ಸುರಿಯಿತು. ಬೀರೂರಲ್ಲಿ ಮಳೆ ಇಲ್ಲ, ಮೋಡ ಕವಿದ ವಾತಾವರಣವಿದೆ.

-- ಬಾಕ್ಸ್--

ಒಂದು ಗಂಟೆ ಸುರಿದ ಮಳೆ

ನರಸಿಂಹರಾಜಪುರ: ಪಟ್ಟಣ, ಕುದುರೆಗುಂಡಿ, ಬಿ.ಎಚ್.ಕೈಮರ, ಗುಬ್ಬಿಗಾ, ಮೂಡಬಾಗಿಲು, ಸೀತೂರು ಸೇರಿದಂತೆ ಸುತ್ತ ಮುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮದ್ಯಾಹ್ನ 4.30 ಗಂಟೆಯಿಂದ 1 ಗಂಟೆಗಳ ಕಾಲ ಗುಡುಗು, ಆನೆಕಲ್ಲಿನ ಮಳೆ ಸುರಿದಿದೆ. ಕಳೆದ 20 ದಿನಗಳ ಕೆಳಗೆ ಕುದುರೆಗುಂಡಿ, ಕಾನೂರು, ಸೀತೂರು ಭಾಗದಲ್ಲಿ 1 ಗಂಟೆಗಳ ಕಾಲ ಬಾರೀ ಮಳೆ ಸುರಿದಿತ್ತು. ಮಳೆಯಿಂದ ಕಾಫಿ ತೋಟ,ಅಡಿಕೆ ತೋಟಗಳಿಗೆ ಅನುಕೂಲವಾಗಿದೆ. ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ತಂಪಾದ ಅನುಭವವಾಗಿದೆ.

-- ಬಾಕ್ಸ್--

ಶೃಂಗೇರಿ: ಗುಡುಗು ಸಹಿತ ಗಾಳಿಮಳೆಶೃಂಗೇರಿ: ತಾಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಮಧ್ಯಾಹ್ನದಿಂದ ದಟ್ಟ ಮೋಡ ಕವಿದ ವಾತಾವರಣ ಆವರಿಸಿತ್ತು. ಗಾಳಿಯ ಆರ್ಭಟದಿಂದ ಆರಂಭವಾಗಿ ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ.ಶೃಂಗೇರಿ ಪಟ್ಟಣದಲ್ಲೂ ಕೆಲಹೊತ್ತು ಗಾಳಿ ಮಳೆಯಾಗಿದೆ. ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ, ಮೆಣಸೆ ಸೇರಿದಂತೆ ಹಲವೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ ಯಾಗಿದೆ.ಕಳೆದೆರೆಡು ದಿನಗಳಿಂದ ದಟ್ಟ ಮೋಡ, ಗುಡುಗು ಸಿಡಿಲಿನ ಆರ್ಭಟವಿತ್ತು. ಭಾನುವಾರ ಸುರಿದ ಮಳೆಯಿಂದ ಸುಡು ಬಿಸಿಲ ಧಗೆಗೆ ತಂಪೆರೆದಂತಾಯಿತು.ಎರಡು ತಿಂಗಳಿಂದ ಮಳೆಯೇ ಇಲ್ಲದೇ ಸುಡು ಬಿಸಿಲಿದ್ದು ಕೆರೆ ಕಾಲುವೆ ಬಾವಿಗಳಲ್ಲಿ ನೀರು ಬತ್ತಿಹೋಗುತ್ತಿದೆ. ಅಂತರ್ಜಲ ಕೊರತೆಯಿಂದ ನೀರಿನ ಅಭಾವ ಆರಂಭಗೊಂಡಿದೆ. ತುಂಗಾ ನದಿ ಸಹಿತ ಉಪನದಿಗಳಲ್ಲೂ ನೀರಿನ ಮಟ್ಟ ಸಂಪೂರ್ಣವಾಗಿ ಕ್ಷೀಣಿಸಿ ಕಾಲುವೆಯಂತೆ ಹರಿಯುತ್ತಿದೆ. ಅಡಕೆ,ಕಾಫಿ ತೋಟಗಳು ನೀರಿಲ್ಲದೇ ಭಣಗಟ್ಟುತ್ತಿವೆ.

ಫೋಟೋ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಳಸದ ಕಳಸೇಶ್ವರ ದೇವಸ್ಥಾನದಲ್ಲಿ ಭಾನುವಾರ ನಾಡಿನ ಸುವೃಷ್ಟಿಗಾಗಿ ವಿಶೇಷ ಪೂಜೆಗಳು ನಡೆಯಿತು.