ಕಾಫಿ ಬೆಳೆಗಾರರ ಮುಖದಲ್ಲಿ ಕಿರುನಗೆ ತಂದ ಮಳೆ

| Published : Mar 14 2025, 12:35 AM IST

ಸಾರಾಂಶ

ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಮಳೆ ಕಾಫಿ ಬೆಳೆಗಾರರ ಸಂಭ್ರಮಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮುಂಗಾರು ಮಳೆಯಾಗುವುದು ಮಲೆನಾಡಿನಲ್ಲಿ ವಾಡಿಕೆಯಾಗಿತ್ತು. ಆದರೆ ಈ ಬಾರಿ ಮಳೆಯ ವಾತಾವಾರಣವೆ ಕಂಡುಬಾರದ ಕಾರಣ ಕಾಫಿ ಹೂವು ಮೂಡಿಸಲು ಹಾಗೂ ಕಾಫಿ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ ಬೆಳೆಗಾರರು ಫೆಬ್ರುವರಿ ಮಧ್ಯಭಾಗದಿಂದ ಹನಿ ನೀರಾವರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿದ್ಯಾಕಾಂತರಾಜ್‌

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಮಳೆ ಕಾಫಿ ಬೆಳೆಗಾರರ ಸಂಭ್ರಮಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಫೆಬ್ರುವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮುಂಗಾರು ಮಳೆಯಾಗುವುದು ಮಲೆನಾಡಿನಲ್ಲಿ ವಾಡಿಕೆಯಾಗಿತ್ತು. ಆದರೆ ಈ ಬಾರಿ ಮಳೆಯ ವಾತಾವಾರಣವೆ ಕಂಡುಬಾರದ ಕಾರಣ ಕಾಫಿ ಹೂವು ಮೂಡಿಸಲು ಹಾಗೂ ಕಾಫಿ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ ಬೆಳೆಗಾರರು ಫೆಬ್ರುವರಿ ಮಧ್ಯಭಾಗದಿಂದ ಹನಿ ನೀರಾವರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹನಿ ನೀರಾವರಿಗಾಗಿ ಕೊಟ್ಯಂತರ ರು. ಡೀಸೆಲ್, ವಿದ್ಯುತ್ ಹಾಗೂ ಮಾನವ ಶ್ರಮ ಖರ್ಚಾಗಿದ್ದು ಕನಿಷ್ಠ ಒಮ್ಮೆ ಒಂದು ಅಂಗುಲದಷ್ಟು ಮಳೆಯಾದರೆ ಹನಿ ನೀರಾವರಿಗಾಗಿ ಮುಂದಿನ ಹಂತದಲ್ಲಿ ಮಾಡಲಾಗುವ ಮತ್ತಷ್ಟು ಹಣ ಹಾಗೂ ಶ್ರಮ ಉಳಿತಾಯವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ತೋಟಗಳೆ ನಾಶ: ಮಲೆನಾಡಿನಲ್ಲಿ ಬೇಸಿಗೆ ಆರಂಭದಲ್ಲೆ ಅತ್ಯಂತ ಕಠೋರ ಬಿಸಿಲು ಧಗೆ ಇದ್ದು ಜನರು ಮನೆಯಿಂದ ಹೊರಬರಲು ಹಲವು ಬಾರಿ ಯೋಚಿಸುವಂತ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅದರಲ್ಲೂ ಕನಿಷ್ಠ ಮಳೆ ಬೀಳುವ ತಾಲೂಕಿನ ಬೆಳೆಗೋಡು ಹೋಬಳಿಯಲ್ಲಿ ಬಿಸಿಲ ಧಗೆ ಹೆಚ್ಚಿದ್ದು ಇಲ್ಲಿನ ಕಾಫಿ ತೋಟಗಳು ಬಿಸಿಲ ಧಗೆಗೆ ಸುಟ್ಟು ಹೋಗಲಾರಂಬಿಸಿದ್ದು. ಗಿಡಗಳನ್ನು ಉಳಿಸಿಕೊಳ್ಳಲು ನೀರು ನೀಡುವುದು ಬೆಳೆಗಾರರಿಗೆ ಈಗ ಅನಿವಾರ್ಯವಾಗಿತ್ತು. ತಾಲೂಕಿನ ಶೇ. ೭೦ ರಷ್ಟು ಕಾಫಿ ಮಳೆಗಾರರು ಹನಿನೀರಾವರಿ ವ್ಯವಸ್ಥೆ ಹೊಂದಿದ್ದರೆ ಉಳಿದ ಬೆಳೆಗಾರರು ಮಳೆಯಾಶ್ರಿತಗೊಂಡಿದ್ದು ಇಂತಹ ಬೆಳೆಗಾರರು ತೋಟ ಉಳಿಸಿಕೊಳ್ಳುವ ಚಿಂತೆಯನ್ನು ಇತ್ತೀಚಿಗೆ ಸುರಿದ ಮಳೆ ಸಮನ ಮಾಡಿದೆ.

ನೀರಿನ ಕೊರತೆ: ಹೂವುಗಳು ಹೀಚಾಗಿ ಕಾಯಿರೂಪ ತಾಳಲು ನೀರಿನ ಅಗತ್ಯ ಹೆಚ್ಚಿತ್ತು. ಕನಿಷ್ಠ ೨೦ ದಿನಕ್ಕೊಮ್ಮೆ ಹನಿನೀರಾವರಿ ಮಾಡದಿದ್ದರೆ ಕಾಫಿ ಹೂವುಗಳು ಕಮರಿ ಹೋಗುವುದು ನಿಶ್ಚಿತ. ಇದರಿಂದಾಗಿ ಈಗಾಗಲೇ ಹಲವು ಬೆಳೆಗಾರರು ಎರಡ ರಿಂದ ಮೂರು ಸುತ್ತಿನ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಆದರೆ, ಕೆಲವು ಬೆಳೆಗಾರರಿಗೆ ಒಂದೆರಡು ಬಾರಿಗಿಂತ ಹೆಚ್ಚಿನ ಸುತ್ತಿನ ಹನಿ ನೀರಾವರಿಗೆ ನೀರಿನ ಕೊರತೆ ಎದುರಾಗಿರುವುದರಿಂದ ಕಾಫಿಗಿಡಗಳು ಹೂವಾದರು, ಹೂವುಗಳು ಕಮರದಂತೆ ಉಳಿಸಿಕೊಳ್ಳುವ ಸವಾಲಿಗೆ ಸದ್ಯದ ಮಳೆ ಉತ್ತರವಾಗಿದೆ.

ಹಳ್ಳಕೊಳ್ಳಗಳಲ್ಲಿ ನೀರಿನ ವರತೆ: ಸಾಕಷ್ಟು ಕಾಫಿ ಬೆಳೆಗಾರರು ಸ್ವಂತ ನೀರಿನ ಮೂಲದೊಂದಿಗೆ ಸರ್ಕಾರಿ ಕೆರೆ, ಕಟ್ಟೆ, ಹಳ್ಳ, ಹೊಳೆಗಳ ನೀರನ್ನು ಹನಿನೀರಾವರಿಗಾಗಿ ಬಳಸಿಕೊಳ್ಳುವುದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಹಳ್ಳ,ಹೊಳೆಗಳಲ್ಲಿ ನೀರಿನ ಹರಿವು ಕ್ಷೀಣಿಸಿದ್ದು ಸರ್ಕಾರಿ ನೀರಿನ ಮೂಲಗಳಿಗೆ ಮೋಟರ್ ಇಡದಂತೆ ಪ್ರತಿವರ್ಷ ತಾಲೂಕು ಆಡಳಿತ ಆದೇಶ ಮಾಡುತ್ತಿದ್ದರೂ ಇದನ್ನು ಗಂಭೀರವಾಗಿ ಬೆಳೆಗಾರರು ಪರಿಗಣಿಸಿದೆ ನಿರಂತರವಾಗಿ ನಿರೇತ್ತಲಾಗುತ್ತಿತ್ತು. ಇದರಿಂದಾಗಿ ನದಿ ಮೂಲಗಳಲ್ಲಿ ದಿನಕಳೆದಂತೆ ನೀರಿನ ಹರಿವು ಕಡಿಮೆಯಾಗುತ್ತಾ ಸಾಗಿತ್ತು. ಆದರೆ ಇತ್ತೀಚಿಗೆ ಸುರಿದ ಮಳೆ ಬತ್ತಿದ್ದ ತೊರೆಗಳಲ್ಲಿ ನೀರಿನ ವರತೆ ಜಿನುಗುವಂತೆ ಮಾಡಿದೆ. ಮಲೆನಾಡಿನಲ್ಲಿ ಹೆಚ್ಚು ಧಗೆ: ಈ ಬಾರಿ ಬೇಸಿಗೆ ಆರಂಭದಲ್ಲೆ ಬಿಸಿಲಿನ ಧಗೆ ಮೀತಿ ಮೀರಿದ್ದು ಕಳೆದ ತಾಲೂಕಿನಲ್ಲಿ ೩೭ ಡಿಗ್ರಿ ತಾಪಮಾನ ದಾಖಲಾಗಿದೆ. ಕಳೆದೊಂದು ವಾರದಿಂದ ಇದೆ ತಾಪಮಾನ ತಾಲೂಕಿನಲ್ಲಿದ್ದು ಮಾರ್ಚ್ ಮೊದಲ ವಾರದಲ್ಲಿ ಈ ತಾಪಮಾನ ತಾಲೂಕಿನ ಇತಿಹಾಸದಲ್ಲೆ ಮೊದಲು ಎನ್ನಲಾಗುತ್ತಿದೆ. ಬಾರಿ ಪ್ರಮಾಣದ ಧಗೆ ಸದ್ಯ ತಾಲೂಕಿನ ಜನರನ್ನು ಕೆಂಗೆಡಿಸಿದ್ದು ಮದ್ಯಾಹ್ನದ ವೇಳೆ ಪಟ್ಟಣ ಹಾಗೂ ಗ್ರಾಮಗಳ ಬೀದಿಗಳು ನಿರ್ಜನವಾಗುತ್ತಿವೆ. ಹವಾಮಾನ ಇಲಾಖೆ: ಮಾ.೧೪ ರಂದು ತಾಲೂಕಿನಲ್ಲಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಹೇಳಿದೆ. ಇದರಿಂದಾಗಿ ಬೆಳೆಗಾರರು ನಿತ್ಯ ಮುಗಿಲು ದಿಟ್ಟಿಸುತ್ತಿದ್ದು ದೇವರ ದಯೆಯಿಂದ ಕನಿಷ್ಠ ಒಂದೇರಡು ಅಂಗುಲ ಮಳೆಯಾದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದರು. ಹವಮಾನ ಇಲಾಖೆಯ ವರಧಿಯಂತೆ ತಾಲೂಕಿನ ಎಲ್ಲೇಡೆ ಅರ್ಧ ಅಂಗುಲದಿಂದ ೧.೫ ಅಂಗುಲದವರಗೆ ಮಳೆಯಾಗಿದ್ದು ಗಾಳಿ ಮಳೆಯಿಂದ ಪಟ್ಟಣದ ಹಲವೇಡೆ ಮರದ ರಂಬೆಗಳು ಮುರಿದು ಕಾರಿನ ಮೇಲೆ ಬಿದ್ದು ಅವಘಡ ಸಂಭವಿಸಿದ್ದರೆ ಪಟ್ಟಣದ ಬಾಳೆಗದ್ದೆ ಬಡಾವಣೆಯಲ್ಲಿ ಮನೆಯೊಂದರ ಛಾವಣಿ ಹಾರಿಹೋಗಿ ರದ್ದಾಂತ ಸೃಷ್ಟಿಸಿದ್ದರ ಮದ್ಯೆಯು ಬೆಳೆಗಾರರ ಹರ್ಷಕ್ಕೆ ಏಣೆಯೆ ಇಲ್ಲದಾಗಿದ್ದು ಗುರುವಾರ ಎಲ್ಲೆಡೆ ಮಳೆಯದ್ದೆ ಮಾತು. ಹೆಚ್ಚಿದ ತಂಪುಪಾನೀಯದ ಬೇಡಿಕೆ: ತಾಲೂಕಿನಲ್ಲಿ ಉತ್ತಮ ಎಳೆ ನೀರು ದೊರೆಯದಾಗಿದ್ದು ವ್ಯಾಪಾರಿಗಳು ನೀಡುವ ಎಳೆನೀರಿಗೆ ೬೦ ರು. ನೀಡಬೇಕಿದೆ ಇದರಿಂದಾಗಿ ಕಲ್ಲಂಗಡಿ, ಹಣ್ಣಿನ ರಸಗಳಿಗೆ ಬಾರಿ ಬೇಡಿಕೆ ಉಂಟಾಗಿದೆ.

ಬಾರಿ ವೈವಾಟಿಗೆ ಪೆಟ್ಟು: ಜನವರಿಯಿಂದ ಇದುವರಗೆ ಮಳೆಯಾಗದ ಕಾರಣ ಹನಿ ನೀರಾವರಿಗಾಗಿ ಎಂಜನೀಯರಿಂಗ್ ಶಾಪ್‌ಗಳಿಗೆ ಹಾಗೂ ಮೆಕ್ಯಾನಿಕ್‌ಗಳಿಗೆ ಬೀಡುವಿಲ್ಲದ ದುಡಿಮೆ ನೀಡಿದ್ದು ಪ್ರಸಕ್ತ ವರ್ಷ ೫ ರಿಂದ ೮೦ ಎಚ್.ಪಿಯ ಸುಮಾರು ೧೪೧೦ ಮೋಟರ್‌ಗಳು ವ್ಯಾಪಾರವಾಗಿದ್ದು ಈ ಮೂಲಕ ೨೫ ಕೋಟಿ ರು.ಗೂ ಅಧಿಕ ವೈವಾಟು ಎಂಜನೀಯರಿಂಗ್ ಶಾಪ್‌ಗಳಲ್ಲಿ ನಡೆದಿದೆ. ಮೋಟರ್ ರೀಪೆರಿ, ಜಟ್ಟ್ ದುರಸ್ಥಿ, ವಿದ್ಯುತ್ ಉಪಕರಣಗಳ ದುರಸ್ಥಿ ಹೆಸರಿನಲ್ಲಿ ಮೆಕ್ಯಾನಿಕ್‌ಗಳಿಗೆ ಇನ್ನೀಲ್ಲದ ಬೇಡಿಕೆ ಸೃಷ್ಟಿಸಿದ್ದು, ಇತ್ತೀಚಿಗೆ ಸುರಿದ ಮಳೆ ಮೆಕ್ಯಾನಿಕ್‌ಗಳ ಅವಲಂಭನೆಯನ್ನು ಕಡಿಮೆಗೊಳಿಸಿದೆ.

ಈಗಾಗಲೇ ಸಾಕಷ್ಟು ಬೆಳೆಗಾರರು ಒಂದು ಸುತ್ತಿನ ಹನಿ ನೀರಾವರಿ ಮಾಡಿದ್ದಾರೆ. ಆದರೆ ಮತ್ತೊಂದು ಸುತ್ತಿನ ಹನಿ ನೀರಾವರಿಗಾಗಿ ಮಾಡಬೇಕಿದ್ದು, ಮತ್ತಷ್ಟು ವೆಚ್ಚ ಮಳೆಯಿಂದಾಗಿ ತಪ್ಪಿದೆ.

ಎಚ್.ಎಂ ವಿಶ್ವನಾಥ್, ಮಾಜಿ ಶಾಸಕ ಸರ್ಕಾರಿ ನೀರಾವರಿ ಮೂಲಗಳಿಗೆ ಮೋಟರ್‌ಗಳನ್ನು ಇಟ್ಟರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಈಗಾಗಲೇ ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಬೆಳೆಗಾರರಿಗೆ ತಿಳಿಸಲಾಗಿದೆ.

ಅರವಿಂದ್, ತಹಸೀಲ್ದಾರ್