ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ರಾಜ್ಯದ 5 ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ.ಹಾವೇರಿ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಶಿಗ್ಗಾಂವಿ, ಸವಣೂರುಗಳಲ್ಲಿ ಉತ್ತಮ ಮಳೆಯಾಗಿದೆ. ರಾಣಿಬೆನ್ನೂರಿನಲ್ಲಿ ಗಾಳಿ ಸಹಿತ ಮಳೆ ಸುರಿದಿದ್ದರಿಂದ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ಬೆಳೆಗಳು ಹಾನಿಗೀಡಾಗಿವೆ. ಧಾರವಾಡ, ಹುಬ್ಬಳ್ಳಿ, ಕಲಘಟಗಿ ಸೇರಿದಂತೆ ಧಾರವಾಡ ಜಿಲ್ಲೆಯ ಹಲವೆಡೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.
ರೋಣ, ಡಂಬಳ, ಗದಗ-ಬೆಟಗೇರಿ ಸೇರಿ ಗದಗ ಜಿಲ್ಲೆಯಾದ್ಯಂತ ಮಧ್ಯಾಹ್ನದ ನಂತರ ಸುಮಾರು 10 ನಿಮಿಷಗಳ ಕಾಲ ರಭಸದ ಮಳೆ ಸುರಿದಿದೆ. ಭದ್ರಾವತಿ ಸೇರಿ ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಸೋಮವಾರ ಸಂಜೆ ಗುಡುಗು, ಗಾಳಿ ಸಹಿತ ಜೋರು ಮಳೆ ಸುರಿಯಿತು. ಭಾರಿ ಗಾಳಿಯಿಂದಾಗಿ ಮನೆ, ಶಾಲೆ, ಇತರ ಕಟ್ಟಡಗಳ ಹೆಂಚು ಮತ್ತು ಶೀಟುಗಳು ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬೆಂಕಿ ಉಗುಳುವ ಬಿಸಿಲು ಮತ್ತು ಉಷ್ಣಾಂಶದಿಂದಾಗಿ ಜನರು ತತ್ತರಿಸಿದ್ದು, ಸೋಮವಾರ ಸುರಿದ ಜೋರು ಮಳೆ ಇಳೆ ಮತ್ತು ಜನತೆಗೆ ಒಂದಿಷ್ಟು ತಂಪೆರೆಯಿತು.ಕೊಪ್ಪ, ಜಯಪುರ, ಬಾಳೆಹೊನ್ನೂರು, ಶೃಂಗೇರಿ ಸೇರಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಭಾರೀ ಗಾಳಿ-ಮಳೆಗೆ ಶೃಂಗೇರಿ-ಕೊಪ್ಪ ಮಾರ್ಗದ ಗುಡ್ಡೆತೋಟದ ಬಳಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದು ಟ್ರಾಫಿಕ್ ಜಾಮ್ ಉಂಟಾಗಿತ್ತು.