ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ, ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ವೈಜ್ಞಾನಿಕವಾಗಿ ಸೂಕ್ತ ಪರಿಹಾರ ನೀಡ ಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಆಗ್ರಹಿಸಿದರು.ಮುಂಗಾರು ಬೆಳೆ ಕಳೆದುಕೊಂಡ ರೈತರ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಹಿಂಗಾರು ಬೆಳೆಗೆ ರೈತರಿಗೆ ಬೀಜ, ರಸಗೊಬ್ಬರ, ಔಷಧಿ ಉಚಿತ ವಿತರಣೆಗೆ ಕ್ರಮ ವಹಿಸಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಪ್ರಸಕ್ತ ವರ್ಷದ ಮೇ ಯಿಂದ ಜುಲೈ ಅಂತ್ಯದವರೆಗೆ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾದ ಪರಿಣಾಮ ಮುಂಗಾರಿನ ಎಲ್ಲಾ ಬೆಳೆಗಳಿಗೂ ಹಾನಿಯಾಗಿದೆ. ಫಸಲಿಗೆ ಬಂದ ಮೆಣಸಿನಕಾಯಿ, ಟೊಮ್ಯಾಟೋ, ಬೀನ್ಸ್, ಮೆಕ್ಕೆಜೋಳ ಸೇರಿದಂತೆ ಕಾಫಿ, ಅಡಕೆ, ತೆಂಗು, ಏಲಕ್ಕಿ, ಮೆಣಸು ಮುಂತಾದ ವಾಣಿಜ್ಯ ಬೆಳೆ ನೆಲಕಚ್ಚಿದ್ದು ಸರ್ಕಾರ ಸಮರೋಪಾದಿಯಲ್ಲಿ ಪರಿಹಾರಕ್ಕೆ ಮುಂದಾಗಬೇಕೆಂದು ಹೇಳಿದರು.
ಭಾರೀ ಗಾಳಿಗೆ ಜಿಲ್ಲೆಯಾದ್ಯಂತ ನೂರಾರು ಮನೆಗಳು,ಚಿಕ್ಕಮಗಳೂರು ತಾಲೂಕು ಒಂದರಲ್ಲೇ 65 ಮನೆಗಳು ಪೂರ್ಣ ಹಾಗೂ ಭಾಗಶಃ ಹಾನಿಯಾಗಿದ್ದು, ಸುಮಾರು 3 ಸಾವಿರ ವಿದ್ಯುತ್ ಕಂಬ ಬಿದ್ದಿರುವುದರಿಂದ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ದಿನದೂಡುವಂತಾಗಿದೆ. ಉಸ್ತುವಾರಿ ಸಚಿವರು ಈ ಬಗ್ಗೆ ಸೂಕ್ತ ಕ್ರಮವಹಿಸ ಬೇಕು ಎಂದು ಆಗ್ರಹಿಸಿದರು.ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಸರ್ಕಾರಿ ಪ್ರಾಯೋಜಿತ ಮೋಸದ ಜಾಲ. ಇದರಡಿ ನೋಂದಾಯಿಸಿದ ಶೇ. 95 ರಷ್ಟು ರೈತರಿಗೆ ಸೌಲಭ್ಯ ದೊರೆಯದಂತೆ ಮೋಸ ಮಾಡಿದ್ದಾರೆ ಎಂದು ದೂರಿದರು.
7 ವರ್ಷಗಳ ಬೆಳೆ ಶೇಕಡವಾರು ಅಂದಾಜುಮಾಡಿ ಪರಿಹಾರ ಜಾರಿ ಹಾಗೂ ಕ್ರಾಪ್ ಕಟ್ಟಿಂಗ್ ಎಕ್ಸಪೆರಿ ಮೆಂಟ್ ಈ ಎರಡು ನಿಯಮ ಅವೈಜ್ಞಾನಿಕ. ಸರ್ಕಾರದ ಈ ನಿಯಮ ರದ್ದು ಪಡಿಸುವಂತೆ ಹಾಗೂ ಬೆಳೆ ವಿಮೆ ವ್ಯಾಪ್ತಿಯಿಂದ ರೈತರ ಉತ್ಪನ್ನ ಹೊರಗಿಡುವಂತೆ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ.ಸಿ ಬಸವರಾಜು, ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್, ಉಪಾಧ್ಯಕ್ಷ ಎಚ್.ಎಂ ಲೋಕೇಶ್, ತಾಲೂಕು ಖಜಾಂಚಿ ಜೆ.ಎಸ್ ಶಿವಣ್ಣ ಉಪಸ್ಥಿತರಿದ್ದರು.