- ವೈಲೀಪುರದಲ್ಲಿ 600, ಶೃಂಗಾರಬಾಗುದಲ್ಲಿ 900 ಅಡಕೆ ಮರಗಳು ಧರೆಗೆ
- 510 ಎಕರೆಯಲ್ಲಿ ಬೆಳೆದ ಭತ್ತ ಬೆಳೆ ಹಾನಿಯಿಂದ ₹1.26 ಕೋಟಿ ನಷ್ಟ- - -
ಕನ್ನಡಪ್ರಭ ವಾರ್ತೆ ಚನ್ನಗಿರಿಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ಬಿರುಸಿನ ಸಿಡಿಲು-ಗುಡುಗಿನಿಂದ ಕೂಡಿದ ಭಾರೀ ಮಳೆಗೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಮನೆಗಳು ಬಿದ್ದಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿದೆ.
ಶನಿವಾರ ಸಂಜೆ 5ರಿಂದ ರಾತ್ರಿ 7 ಗಂಟೆವರೆಗೆ ಗುಡುಗು, ಸಿಡಿಲುಗಳಿಂದ ಕೂಡಿದ ಮಳೆಯಾಗಿದ್ದು, ಬಸವಾಪಟ್ಟಣ ಹೋಬಳಿಯ ಶೃಂಗಾರಬಾಗು ತಾಂಡದಲ್ಲಿ 4 ಮನೆಗಳು, ನಿಲೋಗಲ್ ಗ್ರಾಮದಲ್ಲಿ 2, ತ್ಯಾವಣಿಗೆ ಗ್ರಾಮದಲ್ಲಿ 3, ಬಸವೇಶ್ವರ ಕ್ಯಾಂಪ್ ನಲ್ಲಿ 1 ಮನೆಗಳು ಭಾಗಶಃ ಹಾನಿಗೀಡಾಗಿದೆ.
ವೈಲೀಪುರ ಗ್ರಾಮದಲ್ಲಿ 600 ಅಡಕೆ ಗಿಡಗಳು ಮತ್ತು ಶೃಂಗಾರಬಾಗು ಗ್ರಾಮದಲ್ಲಿ 900 ಅಡಕೆ ಮರಗಳು ಗಾಳಿಗೆ ನೆಲಕ್ಕುರುಳಿವೆ. ತ್ಯಾವಣಿಗೆ ಗ್ರಾಮದಲ್ಲಿ 300 ಎಕರೆ ಕಟಾವಿಗೆ ಬಂದಿದ್ದ ಭತ್ತ ಮಳೆಯಿಂದ ನೆಲಕ್ಕೆ ಬಿದಿದ್ದರೆ, ನಲ್ಕುದುರೆ ಗ್ರಾಮದಲ್ಲಿ 60 ಎಕರೆ, ಮೀಯಾಪುರ ಗ್ರಾಮದಲ್ಲಿ 50 ಎಕರೆ, ದೊಡ್ಡಘಟ್ಟ ಗ್ರಾಮದಲ್ಲಿ 50 ಎಕರೆ, ಅರೇಹಳ್ಳಿ ಗ್ರಾಮದಲ್ಲಿ 25 ಎಕರೆ, ಕತ್ತಲಗೆರೆ ಗ್ರಾಮದಲ್ಲಿ 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.
ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಹಸೀಲ್ದಾರ್ ಎನ್.ಜೆ.ನಾಗರಾಜ್, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನಲ್ಲಿ ಒಟ್ಟು 10 ಮನೆಗಳು ಭಾಗಶಃ ಬಿದ್ದಿದ್ದು ಇವುಗಳಿಂದ ₹3.60 ಲಕ್ಷದಷ್ಟು ನಷ್ಟ ಸಂಭವಿಸಿದೆ. ₹2.50 ಲಕ್ಷದಷ್ಟು ತೋಟಗಾರಿಕಾ ಬೆಳೆಗಳು ಹಾಳಾಗಿದ್ದು, ಕಟಾವಿನ ಹಂತದಲ್ಲಿದ್ದ 510 ಎಕರೆ ಪ್ರದೇಶದಲ್ಲಿ ಬೆಳೆದಿದ್ದು ಭತ್ತದ ಹಾನಿಯಿಂದ ₹1.26 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.ಈ ಸಂದರ್ಭ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಸೇರಿದಂತೆ ಆಯಾ ಗ್ರಾ.ಪಂ.ಗಳ ಪಿಡಿಒಗಳು, ಸಿಬ್ಬಂದಿ ಹಾಜರಿದ್ದರು.
- - --17ಕೆಸಿಎನ್‌ಜಿ2: ಮಳೆ ಹೊಡೆತಕ್ಕೆ ಹಾನಿಗೀಡಾಗಿರುವ ಭತ್ತದ ಬೆಳೆ.
-17ಕೆಸಿಎನ್ಜಿ3: ಮಳೆ-ಗಾಳಿಗೆ ನೆಲಕ್ಕೆ ಉರುಳಿರುವ ಅಡಕೆ ಮರಗಳು.