ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಸೇಡಂ ತಾಲೂಕಿನಾದ್ಯಂತ ಕಳೆದ 2- 3 ದಿನದಿಂದ ಸುರಿದ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಕೆರೆ, ಟ್ಯಾಂಕ್, ಶಾಲಾ ಕಟ್ಟಡಗಳ ಕುರಿತು ಎರಡು ದಿನದಲ್ಲಿ ತಹಸೀಲ್ದಾರ್‌ಗೆ ಆಯಾ ಇಲಾಖೆ ಅನುಷ್ಠಾನ ಅಧಿಕಾರಿಗಳು ವರದಿ ನೀಡಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೂಚಿಸಿದರು.ಮಂಗಳವಾರ ಸೇಡಂ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅತಿವೃಷ್ಟಿ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದು ಮಾತನಾಡಿದ ಅವರು, ಹಾನಿಯಾದ ರಸ್ತೆ, ಸೇತುವೆ, ಶಾಲಾ ಕಟ್ಟಡ ಹೀಗೆ ಎಲ್ಲವು ದುರಸ್ತಿಗೆ ಬೇಕಾದ ಅಂದಾಜು ಪಟ್ಟಿ ಸಲ್ಲಿಸಿದಲ್ಲಿ ಎನ್.ಡಿ.ಆರ್.ಎಫ್ ನಡಿ ಅನುದಾನ ಬಿಡುಗಡೆಗೊಳಿಸಲಾಗುವುದು. ಈ ಸಂಬಂಧ ಡಿ.ಸಿ. ಜೊತೆಗೆ ಮಾತನಾಡುವೆ ಎಂದರು.
ಮಳೆಗೆ ಚಿಂತಪಳ್ಳಿ ಬಳಿ ಸೇತುವೆ ಹಾನಿಯಾಗಿದ್ದು, ಕೂಡಲೆ ಸರಿಪಡಿಸಿ ಎಂದು ಲೋಕೋಪಯೋಗಿ ಇಲಾಖೆಯ ಇ.ಇ.ಗೆ ನಿರ್ದೇಶನ ನೀಡಿದ ಸಚಿವರು, ಕಲಬುರಗಿ ರಸ್ತೆಯ ಮಳಖೇಡ್ ಬಳಿಯ ಕಾಗಿಣಾ ಹಳೇ ಸೇತುವೆ ಹಾನಿಯಾಗಿದಲ್ಲಿ, ಅದನ್ನು ಸಹ ಸರಿಪಡಿಸುವ ಕೆಲಸವಾಗಬೇಕು ಎಂದು ಕೆ.ಅರ್.ಡಿ.ಸಿ.ಎಲ್ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳು ಮಾತನಾಡಿ ತಾಲೂಕಿನಲ್ಲಿ 10 ರಸ್ತೆ, 3 ಕೆರೆ ಹಾನಿಯಾಗಿದ್ದು, ದುರಸ್ತಿಗೆ 175 ಲಕ್ಷ ರೂ. ಅಗತ್ಯವಿದೆ ಎಂದು ತಿಳಿಸಿದರು. ತಾಲೂಕಿನಲ್ಲಿರುವ 34 ಕೆರೆಗಳು ತುಂಬಿದ್ದು, ಇದುವರೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ, ಕೆರೆ ತುಂಬಿದ್ದರಿಂದ ಮುಂದೆ ಹಾನಿಯಾಗುವ ಸಾಧ್ಯತೆ ಇದ್ದು, ತೀವ್ರ ನಿಗಾ ವಹಿಸಿ ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಕ್ರಮವಾಗಿ ಬಿದ್ದ ಮಳೆ ಪ್ರಮಾಣ ಮತ್ತು ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿದರು. ಕುರಕುಂಟಾ ಗ್ರಾಮದ 40 ವರ್ಷದ ವ್ಯಕ್ತಿ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಕೂಡಲೆ ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಸಿ.ಪಿ.ಐ ಮಹಾದೇವ ಮಾತನಾಡಿ ವ್ಯಕ್ತಿಯ ಶವ ಪತ್ತೆಗೆ ಶೋಧ ನಡೆದಿದ್ದು, ಎಸ್.ಡಿ.ಅರ್.ಎಫ್., ಅಗ್ನಿಶಾಮಕ ತಂಡದ ನೆರವು ಪಡೆಯಲಾಗಿದೆ ಎಂದರು.ಸೇಡಂ ಪಟ್ಟಣದಲ್ಲಿ ಪ್ರಮುಖವಾಗಿ ಇಂದಿರಾ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ತಹಶೀಲ್ದಾರರಿಗೆ ಮನೆಗಳ ಪಟ್ಟಿ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ತಿಳಿಸಿದರು. ತಾಲೂಕಿನಾದ್ಯಂತ ಮಳೆಯಿಂದ ಶಾಲೆಗಳು ಹಾನಿಯಾದಲ್ಲಿ ಬಿ.ಇ.ಓ ಅವರು ಮುಖ್ಯ ಗುರುಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸಬೇಕು ಎಂದು ಸಚಿವರು ತಿಳಿಸಿದರು.
ಪಿ.ಡಿ.ಓ ಗಳು ಕೇಂದ್ರ್ಥಾನದಲ್ಲಿರಿ: ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪಿ.ಡಿ.ಓ, ವಿ.ಎ.ಗಳು ಕೇಂದ್ರಸ್ಥಾನದಲ್ಲಿದ್ದು, ಮಳೆಯಿಂದಾಗುವ ಹಾನಿ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಬೇಕು. ಮನೆಗೆ ನೀರು ನುಗ್ಗಿದ ಪ್ರಕರಣಗಳಲ್ಲಿ ನಿಯಮಾವಳಿಯಂತೆ ಕೂಡಲೆ ಪರಿಹಾರ ವಿತರಣೆ ಮಾಡಬೇಕು ಎಂದು ತಹಶೀಲ್ದಾರ ಶ್ರೇಯಾಂಕಾ ಧನಶ್ರೀ ಅವರಿಗೆ ಸಚಿವರು ಸೂಚನೆ ನೀಡಿದರು.ಸಂಸದ ರಾಧಾಕೃಷ್ಣ ದೊಡ್ಡಮನಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ ಶ್ರೇಯಾಂಕಾ ಧನಶ್ರೀ, ತಾಲೂಕಾ ಪಂಚಾಯತ್ ಇ.ಓ ಚಿನ್ನಪ್ಪ ಸೇರಿದಂತೆ ಅನೇಕ ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇದ್ದರು.
ಸೇಡಂನಲ್ಲಿ 34 ಕೆರೆಗಳು ಭರ್ತಿಸೇಡಂನಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಎಲ್ಲಾ 34 ಕೆರೆಗಳು ಭರ್ತಿಯಾಗಿವೆ. ಕೋನಾಪೂರ ಕೆರೆ ಸ್ವಲ್ಪ ರಿಪೇರಿಯಲ್ಲಿರೋದರಿಂದ ಅಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. ಕೋಂತಪಲ್ಲಿ ಕೆರೆಯಲ್ಲಿಯೂ ಕೋಡಿಗಳ ರಿಪೇರಿ ಮಾಡಲಾಗುತ್ತದೆ ಎಂದು ತಾಲೂಕು ಅಧಿಕಾರಿ ಹೇಳಿದರು. ಕೆರೆಗಳ ಯೋಗಕ್ಷೇಮ ಕಟ್ಟುನಿಟ್ಟಾಗಿ ನೋಡಿಕೊಳ್ಳಲು ಸಚಿವರು ಕರೆ ನೀಡಿದರು. ಮಳಖೇಡದಲ್ಲಿ 1.7 ಹೆಕ್ಟೇರ್ ಬಾಳೆ, 1 ಹೆಕ್ಟೇರ್ ಗುಲಾಬಿ ಫಸಲು ಹಾಳಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವಿದ್ಯುತ್ ಪರಿವರ್ತಕ ಖರಾಬ್- ಕಾಚೂರು ಕಾರ್ಗತ್ತಲುಮಳೆಯಿಂದಾಗಿ ತಾಲೂಕಿನಲ್ಲಿ 28 ವಿದ್ಯುತ್ ಪರಿವರ್ತಕಗಳು ಫೇಲ್ ಆಗಿವೆ. ಅನೇಕ ಕಡೆಗಳಲ್ಲಿ ಕಂಬಗಲು ಬಿದ್ದು ಹೋಗಿವೆ. ಲಿಂಗಸುಗೂರಿನಿಂದ ಕಂಬಗಳು, ಪರಿವರ್ತಕಗಳು ಬರಲಿವೆ. ನಾಳೆ ಅಥವಾ ನಾಡಿದ್ದು ಈ ಟೀಸಿಗಳ ರಿಪೇರಿ ನಡೆಯಲಿದೆ. ಈಗ ತಾತ್ಕಾಲಿಕವಾಗಿ ಬೇರೆಕಡೆಯಿಂದ ವೈರಿಂಗ್ ಮಾಡಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸೇಡಂ ತಾಲೂಕಿನ ಕಾಚೂರಲ್ಲಿ ಪರಿವರ್ತಕ ಕೆಟ್ಟು ನಿಂತಿದ್ದು ಅಲ್ಲಿ ಮಳೆ ನೀರು ವಿಪರೀತವಾಗಿರೋದರಿಂದ ರಿಪೇರಿಯೂ ಅಸಾಧ್ಯವಾಗಿದೆ. ಈ ಊರಿಗೆ ಕರೆಂಟ್ ಪುನಃ ಕೊಡೋದು ತುಸು ವಿಳಂಬವಾಗಲಿದೆ ಎಂದರು. ಕಾಚೂರಿನ ಸಮಸ್ಯೆ ಬಗ ಪರಿಹಾರ ಮಾಡುವಂತೆ ಸಚಿವರು ಖಡಕ್ ಸೂಚನೆ ನೀಡಿದರು.