ಮಳೆ: ಹೂ ಬೆಳೆಗಾರರಿಗೆ ಸಂಕಷ್ಟ

| Published : Oct 18 2024, 12:04 AM IST

ಸಾರಾಂಶ

ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ನಲ್ಲಿ ರೈತರು ಗುಲಾಬಿ ಮತ್ತು ಸೇವಂತಿ ಹೂ ಬೆಳೆದಿದ್ದಾರೆ. ರಾಜ್ಯ ಮತ್ತು ಪಕ್ಕದ ರಾಜ್ಯಗಳೂ ಸೇರಿದಂತೆ ದೇಶಾದ್ಯಂತ ಹೂ ರಪ್ತು ಮಾಡಿ ನಿರಂತರ ಆದಾಯ ಗಳಿಸುತ್ತಿದ್ದರು. ಈಗ ಮಳೆಯಿಂದಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರ ಹೊರವಲಯದ ಕೆ.ವಿ.ಕ್ಯಾಂಪಸ್ ಬಳಿಯ ಹೂವಿನ ಮಾರುಕಟ್ಟೆಯಲ್ಲಿ ಮಳೆಯ ನಡುವೆಯೂ ಹೂವಿನ ವ್ಯಾಪಾರ ನಡೆಯುತ್ತಿದೆ. ಮಾರುಕಟ್ಟೆಗೆ ತಾವು ಬೆಳೆದ ಹೂಗಳೊಂದಿಗೆ ಆಗಮಿಸುತ್ತಿರುವ ರೈತರು, ಹೂಗಳ ಮಾರಾಟದಿಂದ ತಾವು ಅಂದುಕೊಂಡಷ್ಟು ಹಣ ಗಳಿಕೆಯಾಗದೇ ಕಂಗಾಲಾಗಿದ್ದಾರೆ.

ಹೂ ದರ ಕುಸಿತ:

ಜಿಲ್ಲೆಯಲ್ಲಿ ಹೂ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಹೂವುಗಳ ಬೆಲೆ ದಿಢೀರ್ ಕುಸಿತವಾಗಿ ಕಳೆದ ಮೂರು ದಿನಗಳ ಹಿಂದೆ ಕೆಜಿಗೆ 200 ರು.ರಿಂದ 300 ರು. ಇದ್ದ ಗುಲಾಬಿ ಬೆಲೆಯು ಈಗ ದಿಢೀರ್ ಕುಸಿದು ಕೆಜಿಗೆ 40 ರು. ನಿಂದ 60 ರು.ಗೆ ಇಳಿದಿದ್ದು, ಕೆಜಿಗೆ 100 ರು. ನಿಂದ 150 ರು.ಇದ್ದ ಸೇವಂತಿ ಹೂವಿನ ಬೆಲೆ ಈಗ ಕೆಜಿಗೆ 25 ರು.ನಿಂದ 30ರು.ಗೆ ಇಳಿಕೆಯಾಗಿದೆ. ಈ ಸಮಯದಲ್ಲಿ ಮಳೆಯ ತೇವಾಂಶದಿಂದ ಹೂ ಬೆಳೆ ಹೆಚ್ಚು ಇಳುವರಿ ಬಂದಿದ್ದು, ಬೇರೆ ರಾಜ್ಯಗಳಿಗೆ ರಪ್ತು ಆಗುತ್ತಿದ್ದ ಪ್ರಮಾಣ ದಿಢೀರ್ ಇಳಿಕೆಯಿಂದ ಕೇಳುವವರೇ ಇಲ್ಲದಂತಾಗಿದೆ.

ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ನಲ್ಲಿ ರೈತರು ಗುಲಾಬಿ ಮತ್ತು ಸೇವಂತಿ ಹೂ ಬೆಳೆದಿದ್ದಾರೆ. ರಾಜ್ಯ ಮತ್ತು ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಾಂಗಣ, ಕೇರಳ, ಮಹಾರಾಷ್ಟ್ರ, ವಿದರ್ಭ, ತಮಿಳುನಾಡು ಸೇರಿದಂತೆ ದೇಶಾದ್ಯಂತ ಹೂ ರಪ್ತು ಮಾಡಿ ನಿರಂತರ ಆದಾಯ ಗಳಿಸುತ್ತಿದ್ದರು. ಈಗ ಮಳೆಯಿಂದಾಗಿ ಒಳಗಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆಯಿಂದಾಗಿ ಒಂದು ಕಡೆ ಹೂ ಕೊಳೆಯುತ್ತಿದ್ದರೆ, ಮತ್ತೊಂಡೆದೆ ಹೂವಿಗೆ ಬೇಡಿಕೆ ಕುಸಿದಿದೆ. ಉತ್ತಮ ದರಕ್ಕಾಗಿ ರೈತರು ದೀಪಾವಳಿ ವರೆಗೆ ಕಾಯಲೇಬೇಕಾದ ಸ್ಥಿತಿ ಉಂಟಾಗಿದೆ.