ಮಳೆ ಅವಾಂತರ: ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ

| Published : Jun 08 2024, 12:33 AM IST

ಸಾರಾಂಶ

ಪೋಟೋ 7ಸಿಎಲ್‌ಕೆ5ಎಚಳ್ಳಕೆರೆ ತಾಲೂಕಿನ ಗರ‍್ಲಕಟ್ಟೆ ಗ್ರಾಮದ ಮಧುರೆ ನಿಂಗಪ್ಪ ಎಂಬುವವರ ಟೊಮೆಟೊ ಬೆಳೆ ಸಂಪೂರ್ಣ ಜಲಾವೃತ್ತಗೊಂಡಿರುವುದು.

ತಾಲೂಕಿನಾದ್ಯಂತ 188.08 ಮಿಮೀ ಮಳೆ । ಜಲಾವೃತ್ತಗೊಂಡ ಟೊಮೆಟೊ, ಅಡಿಕೆ, ಪಪ್ಪಾಯಿ ಬೆಳೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನಾದ್ಯಂತ ಗುರುವಾರ ರಾತ್ರಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು, ಗ್ರಾಮಾಂತರ ಪ್ರದೇಶದ ಹಲವಾರು ಮನೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.

ಗುರುವಾರ ತಡರಾತ್ರಿ ನಾಯಕನಹಟ್ಟಿ-77.04 ಮಿಮೀ, ಪರಶುರಾಮಪುರ-41.02 ಮಿಮೀ, ತಳಕು-34.04 ಮಿಮೀ, ಚಳ್ಳಕೆರೆ-23.02 ಮಿಮೀ, ದೇವರಮರಿಕುಂಟೆ-13.06 ಮಿಮೀ ಮಳೆ ಸುರಿದಿದ್ದು, ಒಟ್ಟು ತಾಲೂಕಿನಾದ್ಯಂತ 188.08 ಮಿಮೀ. ಮಳೆಯಾಗಿದೆ.

ತಾಲೂಕಿನ ಬಾಲೇನಹಳ್ಳಿ ಗ್ರಾಮದ ಪುಟ್ಟಮ್ಮ ಎಂಬುವವರ ಮನೆಗೆ ಏಕಾಏಕಿ ನೀರು ನುಗ್ಗಿ ಮನೆಯಲ್ಲಿದ್ದ ಸಾಮಾನುಗಳು ನೀರಿನಲ್ಲಿ ಮುಳುಗಿ ಸುಮಾರು ₹50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ತಿಮ್ಮಣ್ಣನಹಳ್ಳಿಯ ಸರ್ವೆ.ನಂ. 47ರಲ್ಲಿ ಮಾರುತಿ ಎಂಬುವವರಿಗೆ ಸೇರಿದ ಮೂರು ಎಕರೆಯಲ್ಲಿ ಬೆಳೆದ ಅಡಿಕೆ, ಪಪ್ಪಾಯಿ ಮಳೆ, ಗಾಳಿಯಿಂದ ನಾಶವಾಗಿ ಸುಮಾರು ₹40 ಸಾವಿರ ನಷ್ಟ ಸಂಭವಿಸಿದೆ.

ಗರ‍್ಲಕಟ್ಟೆ ಗ್ರಾಮದ ಸರ್ವೆ.ನಂ. 46ರ ಮಧುರೆ ನಿಂಗಪ್ಪ ಎಂಬುವವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಟೊಮೆಟೊ ಬೆಳೆ ಸಂಪೂರ್ಣ ನೀರಲ್ಲಿ ಮುಳುಗಿ ಲಕ್ಷಾಂತರ ರು. ಹಾನಿ ಉಂಟಾಗಿದೆ. ಅಲ್ಲದೆ ರಾಮಜೋಗಿಹಳ್ಳಿಯ ತಿಪ್ಪೇಸ್ವಾಮಿ ಮನೆ ಹಿಂಭಾಗದ ಗೋಡೆ ಬಿದ್ದು ₹20 ಸಾವಿರ ನಷ್ಟವಾಗಿದೆ.

ನಗರದ ಬಿಇಒ ಕಚೇರಿ ಮುಂಭಾಗದಲ್ಲಿದ್ದ ಮರವೊಂದು ಬಿರುಗಾಳಿಗೆ ಉರುಳಿ ಬಿದ್ದ ಪರಿಣಾಮ ಕಚೇರಿ ಸಂಪರ್ಕದ ವಿದ್ಯುತ್ ಕಂಬ ಹಾಗೂ ತಂತಿಗಳು ನೆಲಕ್ಕುರುಳಿವೆ. ಕೂಡಲೇ ಕಚೇರಿ ಸಿಬ್ಬಂದಿ ಬೆಸ್ಕಾಂಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ವರ್ಗ ಮರ ತೆರವುಗೊಳಿಸಿ ಬದಲಿ ಕಂಬ ನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.