ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ತೀವ್ರತೆ ಇಳಿಮುಖವಾಗಿದ್ದು, ಪ್ರವಾಹ ಆತಂಕ ತಗ್ಗಿದೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದರೂ, ಶುಕ್ರವಾರ ಮಾತ್ರ ಮಳೆ ಕಡಿಮೆಯಾಗಿತ್ತು. ರಾತ್ರಿಯ ಗಾಳಿ-ಮಳೆಗೆ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಉಂಟಾಗಿತ್ತು. ಈ ಮಳೆಗೆ ಜಿಲ್ಲೆಯಲ್ಲಿ ಸುಮಾರು 39 ಕೃಷಿಕರ ತೋಟಗಳಿಗೆ ಲಕ್ಷಾಂತರ ರು. ಹಾನಿಯಾಗಿದೆ.ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದ ಕರುಣಾಕರ ಶೆಟ್ಟಿ ಅವರ ವಾಸದ ಮನೆ ಗಾಳಿಮಳೆಯಿಂದ ಸಂಪೂರ್ಣ ಹಾನಿಗೊಂಡು ಸುಮಾರು 5,00,000 ರು. ಹಾನಿ ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17 ಮನೆಗಳಿಗೆ ಮತ್ತು 2 ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ.ಕಾರ್ಕಳ ತಾಲೂಕೊಂದರಲ್ಲಿಯೇ 34 ಕೃಷಿಕರ ತೋಟಗಾರಿಕಾ ಬೆಳೆಗಳು ಗಾಳಿಮಳೆಗೆ ಹಾನಿಗೊಂಡಿದ್ದು, ಸುಮಾರು 6.30 ಲಕ್ಷ ರು. ನಷ್ಟ ಸಂಭವಿಸಿದೆ. ಉಳಿದಂತೆ ಕುಂದಾಪುರದ 4 ಕೃಷಿಕರಿಗೆ 37 ಸಾವಿರ ರು., ಹೆಬ್ರಿಯ ಒಬ್ಬ ರೈತರಿಗೆ 10 ಸಾವಿರ ರು. ಬೆಳೆ ಹಾನಿಯಾಗಿದೆ.ಕಾರ್ಕಳ ತಾಲೂಕಿನ 8 ಮನೆಗಳಿಗೆ ಗಾಳಿಮಳೆಯಿಂದ 2.25 ಲಕ್ಷ ರು., ಕುಂದಾಪುರ ತಾಲೂಕಿನ 5 ಮನೆಗಳಿಗೆ 1.80 ಲಕ್ಷ ರು., ಬೈಂದೂರಿನ 2 ಮನೆಗಳಿಗೆ 60ಸಾವಿರ ರು. ಮತ್ತು ಕಾಪುವಿನ 1 ಮನೆಗೆ 50 ಸಾವಿರ ರು.ಗಳಷ್ಟು ಹಾನಿ ಸಂಭವಿಸಿದೆ.ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನ ಜಿಲ್ಲೆಯಲ್ಲಿ ಉತ್ತಮ ಮಳೆ ಮತ್ತು 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಸಮುದ್ರದಲ್ಲಿ 2.40- 2.50 ಮೀಟರ್ ಎತ್ತರ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಎಚ್ಚರದಿಂದಿರಬೇಕು ಎಂದು ಹೇಳಲಾಗಿದೆ.
ಮಂಗಳೂರು ವರದಿ:ಧಾರಾಕಾರ ಮಳೆಯಿಂದಾಗಿ ಕೆಲವು ದಿನಗಳಿಂದ ತೀವ್ರ ಹಾನಿ ಉಂಟಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಕೊಂಚ ಬಿಡುವು ಪಡೆದಿದೆ. ಜತೆಗೆ ನದಿಗಳ ಪ್ರವಾಹವೂ ಇಳಿಕೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ ಕೆಲವು ಕಡೆ ಸಣ್ಣಪುಟ್ಟ ಹಾನಿ ಸಂಭವಿಸಿದೆ.ಗುರುವಾರ ಬೆಳ್ತಂಗಡಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಫಲ್ಗುಣಿ ನದಿ ಪ್ರವಾಹ ಉಕ್ಕಿ ಹರಿದು ನದಿಯುದ್ದಕ್ಕೂ ಎರಡೂ ಬದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಗುರುಪುರ, ಪಡುಶೆಡ್ಡೆ, ಬಂಟ್ವಾಳದ ಅಮ್ಮುಂಜೆ, ಬೆಳ್ತಂಗಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಬಹಳಷ್ಟು ಮನೆಗಳು ಜಲಾವೃತಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಶುಕ್ರವಾರ ಮಳೆ ಇಳಿಮುಖಗೊಂಡಿದ್ದರಿಂದ ಪ್ರವಾಹ ಆತಂಕ ಇರಲಿಲ್ಲ. ಗುರುಪುರ, ಅದ್ಯಪಾಡಿ, ವಾಮಂಜೂರು, ತಿರುವೈಲು ಸೇರಿದಂತೆ ಕೂಳೂರು, ಪಡ್ಡೋಡಿ, ಪಂಜಿಮೊಗರಿನಲ್ಲಿ ಕಾಣಿಸಿಕೊಂಡ ಪ್ರವಾಹ ಅಬ್ಬರ ಪೂರ್ಣ ಪ್ರಮಾಣದಲ್ಲಿ ಇಳಿದಿದೆ.
ಅಲ್ಲಲ್ಲಿ ಹಾನಿ: ಮಂಗಳೂರು ನಗರದ ಗೋರಿಗುಡ್ಡೆಯಲ್ಲಿ ಆವರಣ ಗೋಡೆ ಕುಸಿದು ಬಿದ್ದು ವೆಲೆನ್ಸಿಯ ಕಡೆಗೆ ಸಾಗುವ ಸಂಪರ್ಕ ರಸ್ತೆಗೆ ಅಡಚಣೆಯಾಗಿತ್ತು. ಜೆಪ್ಪು ಜೆರೋಸಾ ಶಾಲೆ ಬಳಿ ಆವರಣಗೋಡೆ ಕುಸಿತ, ಕಾವೂರು ಶಾಂತಿನಗರದಲ್ಲಿ ಗೋಡೆ ಕುಸಿದು ಮನೆಗೆ ಹಾನಿ ಸಂಭವಿಸಿದೆ. ಲೋವರ್ ಬೆಂದುರ್‌ವೆಲ್‌ನಲ್ಲಿ ಆವರಣ ಗೋಡೆ ಕುಸಿದು ಹಾನಿ ಸಂಭವಿಸಿದೆ.ಆವರಣ ಗೋಡೆ ತೆರವು: ಮಂಗಳೂರು ನಗರದ ಗೋಲ್ಡ್ ಫಿಂಚ್ ಹೊಟೇಲ್ ಮುಂಭಾಗದ ಬ್ರಿಡ್ಜ್ ಸ್ಕ್ವೇರ್ ರಸ್ತೆಯಲ್ಲಿ ಆವರಣ ಗೋಡೆ ಕುಸಿಯುವ ಭೀತಿ ಎದುರಾಗಿದ್ದು, ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಯಿತು. ಇಲ್ಲಿನ ಎಸ್‌ಎಂಎಫ್‌ಜಿ ಬ್ಯಾಂಕ್ ಎದುರಿನ ಆವರಣ ಗೋಡೆ ರಸ್ತೆ ಬದಿಗೆ ವಾಲಿಕೊಂಡಿದ್ದು, ಕುಸಿಯುವ ಸಂಭವವಿತ್ತು. ವಿಷಯ ತಿಳಿದ ತಕ್ಷಣ ಪಾಲಿಕೆ ಆಯುಕ್ತರು ತೆರವು ಕಾರ್ಯಾಚರಣೆ ನಡೆಸಿದ್ದಾರೆ.ಕೂಳೂರು ಚರ್ಚ್ ಆವರಣದಲ್ಲಿರುವ ಕಾಳಜಿ ಕೇಂದ್ರದಲ್ಲಿ 200ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ಗುರುವಾರ ಮಳೆ ಕಡಿಮೆಯಾಗಿದ್ದರಿಂದ ಹೆಚ್ಚಿನವರು ಮನೆಗೆ ತೆರಳಿದ್ದಾರೆ. ಕೆಲವರು ರಾತ್ರಿ ಬಳಿಕ ಮತ್ತೆ ಕಾಳಜಿ ಕೇಂದ್ರಕ್ಕೆ ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರ, ಒರಿಸ್ಸಾ, ಕಲ್ಕತ್ತಾ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಶುಕ್ರವಾರ ಮುಂಜಾನೆ ವರೆಗೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 116 ಮಿ.ಮೀ. ಮಳೆಯಾಗಿದೆ. ಅದರಲ್ಲಿ ತಾಲೂಕುವಾರು ಕಾರ್ಕಳ 99.60, ಕುಂದಾಪುರ 120.30, ಉಡುಪಿ 117.10, ಬೈಂದೂರು 127.20, ಬ್ರಹ್ಮಾವರ 117.50, ಕಾಪು 115.90, ಹೆಬ್ರಿ 118.30 ಮಿ.ಮೀ. ಮಳೆ ಆಗಿದೆ.
ಮೂಲ್ಕಿ: ಕೆಲವೆಡೆ ಮಳೆ ಹಾನಿಮೂಲ್ಕಿ: ತಾಲೂಕಿನಲ್ಲಿ ಶುಕ್ರವಾರ ಬೆಳಗ್ಗಿನಿಂದ ಬಿರುಸಿನ ಮಳೆಯಾಗಿದ್ದು, ಕೆಲವೆಡೆ ಮಳೆ ಹಾನಿ ಸಂಭವಿಸಿದೆ.
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಚಿತ್ರಾಪುನಲ್ಲಿ ಬಿರುಸಿನ ಮಳೆಗೆ ಗೀತಾ ಎಂಬವರ ಹೆಂಚಿನ ಮನೆಯ ಮಾಡು ಕುಸಿದು ಬಿದ್ದು ಹಾನಿಯಾಗಿದೆ.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟುನಲ್ಲಿ ಬಿರುಸಿನ ಮಳೆಗೆ ಗದ್ದೆಗೆ ನೀರು ನುಗ್ಗಿ ನಾಟಿ ಮಾಡಿದ್ದ ಕಿಶೋರ್ ಎಂಬವರ ಭತ್ತದ ಬೆಳೆಯು ಸಂಪೂರ್ಣ ಹಾನಿಯಾಗಿದೆ. ಮೂಲ್ಕಿ ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.