ಸಾರಾಂಶ
ಹವಾಮಾನ ಇಲಾಖೆ ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಮುನ್ಸೂಚನೆ ನೀಡಿರುವುದು ಮತ್ತಷ್ಟು ಭಯ ಸೃಷ್ಟಿ ಮಾಡಿದೆ.
ಗದಗ: ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಆಗುತ್ತಿರುವ ಮಳೆಯಿಂದಾಗಿ ರೈತಾಪಿ ವರ್ಗ ಆತಂಕ ಎದುರಿಸುತ್ತಿದೆ. ಅದರಲ್ಲಿಯೂ ಹಿಂಗಾರು ಬಿತ್ತನೆ ಸಿದ್ಧತೆಯಲ್ಲಿ ರೈತ ಕುಟುಂಬಗಳಿಗೆ ಹವಾಮಾನ ಇಲಾಖೆ ಇನ್ನು ನಾಲ್ಕೈದು ದಿನಗಳ ಕಾಲ ಮಳೆ ಮನ್ಸೂಚನೆ ನೀಡಿರುವುದು ಮತ್ತಷ್ಟು ಭಯ ಸೃಷ್ಟಿ ಮಾಡಿದೆ.
ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಬಿತ್ತನೆಗೆ ರೈತರು ಎಲ್ಲ ರೀತಿಯ ಸಿದ್ಧತೆ ಪೂರ್ಣಗೊಳಿಸಿದ್ದು, ಗೊಬ್ಬರ ವ್ಯಾಪಾರಸ್ಥರು ಸೃಷ್ಟಿಸಿದ್ದ ಕೃತಕ ಅಭಾವದಿಂದಾಗಿ ಹೆಚ್ಚುವರಿಯಾಗಿ ಹಣ ನೀಡಿ ಬೀಜ, ಗೊಬ್ಬರ ಖರೀದಿಸಿಟ್ಟುಕೊಂಡಿದ್ದಾರೆ. ಆದರೆ, ಮಳೆ ಮಾತ್ರ ರೈತರನ್ನು ಕಂಗೆಡುವಂತೆ ಮಾಡಿದೆ.1.15 ಲಕ್ಷ ಹೆ ಅಧಿಕ ಬಿತ್ತನೆ ಸಾಧ್ಯತೆ
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಯರಿ ಭೂಮಿ (ಕಪ್ಪು ಮಣ್ಣು) ಹೊಂದಿರುವ ರೋಣ, ನರಗುಂದ, ಗದಗ ಹಾಗೂ ಗಜೇಂದ್ರಗಡ ತಾಲೂಕುಗಳ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಲೆ ಬಿತ್ತನೆಯಾಗುತ್ತದೆ. ಕೃಷಿ ಇಲಾಖೆ ಪ್ರಸಕ್ತ ಸಾಲಿನ ಅಂದಾಜಿನ ಪ್ರಕಾರ 1.15 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಲಿದೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆಗೆ ತೀವ್ರ ತೊಡಕಾಗಿದೆ.ಈರುಳ್ಳಿ ನೆನೆದು ಹಾಳು
ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಈರುಳ್ಳಿ 50 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ನೆನೆದು ಹಾಳಾಗಿದೆ. ಅದರಲ್ಲಿಯೂ ಈಗಾಗಲೇ ಕಟಾವ್ ಹಂತದಲ್ಲಿರುವ ಡಂಬಳ ಹೋಬಳಿ ವ್ಯಾಪ್ತಿಯ ರೈತರು ಬೆಳೆದ ಈರುಳ್ಳಿಯನ್ನು ಮಾರಾಟಕ್ಕೆ ತರಲಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಶೇಂಗಾ ಬೆಳೆದ ರೈತರೂ ಸಮಸ್ಯೆ ಎದುರಿಸುವಂತಾಗಿದೆ.ಭಾರಿ ಮಳೆ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಮುಂದಿನ ಮೂರ್ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಎಚ್ಚರಿಕೆ ನೀಡಿದೆ. ಈಗಾಗಲೇ ಸುರಿದಿರುವ ಮಳೆಯಿಂದಲೇ ಸಾಕಷ್ಟು ತೊಂದರೆಯಾಗಿದೆ. ಮತ್ತೆ ನಾಲ್ಕೈದು ದಿನ ಮಳೆಯಾದರೆ ಹೇಗೆ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.ಮುಂಗಾರು ಹಂಗಾಮಿನ ಬೆಳೆಗಳ ಕಟಾವ್ ಈಗಾಗಲೇ ಪೂರ್ಣಗೊಂಡಿದ್ದು, ಹಿಂಗಾರು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಹೆಚ್ಚಿನ ಮಳೆಯಾದಲ್ಲಿ ಈರುಳ್ಳಿ ಬೆಳೆಗೆ ಅಲ್ಪ ತೊಂದರೆಯಾಗಲಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು.ರೈತರಿಗೆ ತೊಂದರೆ
ಜಿಲ್ಲಾದ್ಯಂತ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ರೈತರು ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಈರುಳ್ಳಿ ಕಟಾವ್ ಹಂತಕ್ಕೆ ಬಂದಿದ್ದು ರೈತರು ತೊಂದರೆ ಅನುಭವಿಸುವಂತಾಗಿದೆ.ಸಂಗಪ್ಪ ಜೋಗರಡ್ಡಿ, ರೋಣ ತಾಲೂಕಿನ ರೈತ.