ಸಾರಾಂಶ
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಅಪಾರ ನಷ್ಟವಾಗಿದೆ. ಜಿಲ್ಲೆಯಲ್ಲಿ 148 ಮನೆಗಳಿಗೆ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಈವರೆಗೆ ಮಳೆಯಿಂದ 9 ಪ್ರದೇಶಗಳ ಸುಮಾರು 90 ಮಂದಿ ಸಂತ್ರಸ್ತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 148 ಮನೆಗಳಿಗೆ ಹಾನಿಯಾಗಿದೆ. 12 ಮನೆಗಳು ಪೂರ್ಣ ಹಾನಿಯಾಗಿದೆ. 35 ಮನೆಗಳು ಭಾಗಶಃ, 101 ಮನೆಗಳಿಗೆ ಅಲ್ಪ ಹಾನಿಯಾಗಿದೆ.ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ 1819 ವಿದ್ಯುತ್ ಕಂಬಗಳು ಧರೆಗುರುಳಿದೆ. 43 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ. 1 ಅಂಗನವಾಡಿ ಹಾಗೂ 2 ಶಾಲೆಗಳ ಕಟ್ಟಡಕ್ಕೆ ಹಾನಿಯಾಗಿದೆ. ಕೊಯನಾಡುವಿನ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಬರೆ ಕುಸಿದು ಸಂಪೂರ್ಣ ನಷ್ಟವಾಗಿದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಮಸ್ಯೆಯುಂಟಾಗಿದೆ. ಗಾಳಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ರಸ್ತೆಯ ಅಡ್ಡಲಾಗಿ ಬಿದ್ದ 85 ಮರಗಳನ್ನು ತೆರವುವೊಳಿಸಲಾಗಿದೆ.
ಮಳೆ ಇಳಿಮುಖ: ಜಿಲ್ಲೆಯಾದ್ಯಂತ ಭಾನುವಾರ ಮಳೆ ಪ್ರಮಾಣ ಇಳಿಮುಖವಾಗಿತ್ತು. ಮಧ್ಯಾಹ್ನದ ನಂತರ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಮಳೆ ಕಡಿಮೆಯಾದರೂ ಜಿಲ್ಲೆಯ ವಿವಿಧೆಡೆಗಳಲ್ಲಿ ಒಂದು ಜಾನುವಾರು ಮೃತಪಟ್ಟಿದೆ ಹಾಗೂ ಕೆಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರಸಂತೆ ಹೋಬಳಿಯ ಗೌಡಳ್ಳಿ ಗ್ರಾಮದ ಮಹೇಶ್ ಎಂಬುವವರ ಹಾಲು ಕೊಡುತ್ತಿದ್ದ ಹಸು ಈಮಳೆಯಿಂದ ಗದ್ದೆಯಲ್ಲಿ ಕೆಸರಿಗೆ ಸಿಲುಕಿ ಮೃತಪಟ್ಟಿದೆ. ಶನಿವಾರಸಂತೆ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕುಶಾಲನಗರ ತಾಲೂಕಿನ ಕುಶಾಲನಗರ ಹೋಬಳಿಯ ಚಿಕ್ಕತ್ತೂರು ಗ್ರಾಮದ ಪುಟ್ಟಣ್ಮಯ್ಯ ಅವರ ಮನೆ ಹಿಂದಿನ ಗೋಡೆ ಮಳೆಗೆ ಭಾಗಶಃ ಹಾನಿಯಾಗಿದೆ. ಕುಶಾಲನಗರ ಹೋಬಳಿಯ ಕಾಳಿದೇವರಹೊಸೂರುಲ್ಲಿ ಮನೆಯ ಗೋಡೆ ತೀವ್ರವಾಗಿ ಹಾನಿಯಾಗಿದೆ. ಕುಶಾಲನಗರ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಬೇಬಿ ಅವರ ಮನೆಯ ಗೋಡೆ ಭಾಗಶಃ ಹಾನಿಯಾಗಿದೆ.
ಕುಶಾಲನಗರ ಹೋಬಳಿಯ ನಲ್ಲೂರು ಗ್ರಾಮದ ವೀರಭದ್ರ ಅವರ ಮನೆ ಭಾಗಶಃ ಹಾನಿಯಾಗಿದೆ. ಚಿಕ್ಕಅಳುವಾರ ಗ್ರಾಮದ ಪ್ರಕಾಶ್ ಅವರ ಮನೆಯ ಗೋಡೆ ಹಾನಿಯಾಗಿದ್ದು ಕಂದಾಯ ಪರಿವೀಕ್ಷಕರು ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.