ಅಂಕೋಲ ಸಮೀಪದ ಶಿರೂರಿನಲ್ಲಿ ಸಂಭವಿಸಿದ್ದ ಭಾರೀ ಭೂಕುಸಿತ: ಮಣ್ಣು ತೆರವಿಗೆ ಮಳೆ ಅಡ್ಡಿ

| Published : Jul 20 2024, 12:57 AM IST / Updated: Jul 20 2024, 09:31 AM IST

ಅಂಕೋಲ ಸಮೀಪದ ಶಿರೂರಿನಲ್ಲಿ ಸಂಭವಿಸಿದ್ದ ಭಾರೀ ಭೂಕುಸಿತ: ಮಣ್ಣು ತೆರವಿಗೆ ಮಳೆ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಕೋಲ ಸಮೀಪದ ಶಿರೂರಿನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರೀ ಭೂಕುಸಿತದಲ್ಲಿ ಕಣ್ಮರೆಯಾದವರ ಪತ್ತೆ ಹಾಗೂ ಮಣ್ಣು ತೆರವು ಕಾರ್ಯಾಚರಣೆಗೆ ಭಾರೀ ಮಳೆ ಮತ್ತು ಬಿರುಗಾಳಿ ಅಡ್ಡಿಯಾಗಿದೆ 

 ಕಾರವಾರ  :  ಅಂಕೋಲ ಸಮೀಪದ ಶಿರೂರಿನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರೀ ಭೂಕುಸಿತದಲ್ಲಿ ಕಣ್ಮರೆಯಾದವರ ಪತ್ತೆ ಹಾಗೂ ಮಣ್ಣು ತೆರವು ಕಾರ್ಯಾಚರಣೆಗೆ ಭಾರೀ ಮಳೆ ಮತ್ತು ಬಿರುಗಾಳಿ ಅಡ್ಡಿಯಾಗಿದೆ. ಘಟನೆಯಲ್ಲಿ 10 ಮಂದಿ ನಾಪತ್ತೆಯಾಗಿರುವ ಶಂಕೆ ಇದ್ದು, ಈಗಾಗಲೇ ಏಳು ಮಂದಿ ಶವ ದೊರೆತಿದೆ. ಉಳಿದ ಮೂವರ ಪತ್ತೆಗಾಗಿ ಜಿಲ್ಲಾಡಳಿತ ನೌಕಾಪಡೆಯ ಮೊರೆ ಹೋಗಿದೆ.

ಗುಡ್ಡಕುಸಿತದಿಂದಾಗಿ ಮಂಗಳೂರು-ಗೋವಾ ಚತುಷ್ಪಥ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್‌ ಆಗಿದ್ದು, ತೆರವು ಕಾರ್ಯಾಚರಣೆ ವಿಳಂಬವಾಗುತ್ತಿರುವುದರಿಂದ ಗೂಡ್ಸ್‌ ವಾಹನಗಳ ಓಡಾಟಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಈಗಾಗಲೇ ಈ ಭಾಗದಲ್ಲಿ ಸರಕುಗಳನ್ನು ಹೊತ್ತ ಭಾರೀ ವಾಹನಗಳು ಎರಡು ದಿನದಿಂದ ರಸ್ತೆ ಬದಿ ಸಾಲುಗಟ್ಟಿ ನಿಂತಿವೆ.

ಭಾರೀ ಮಳೆಯ ನಡುವೆಯೂ ಎನ್‌ಡಿಆರ್‌ಎಫ್ ತಂಡ ಹಗಲು-ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಬಿಡದೆ ಸುರಿಯುತ್ತಿರುವ ಮಳೆ ಹಾಗೂ ಭಾರೀ ಬಂಡೆಗಲ್ಲುಗಳು ಅಂದುಕೊಂಡಂತೆ ಕಾರ್ಯಾಚರಣೆ ನಡೆಸಲು ಅಡ್ಡಿಯಾಗಿದೆ. ಸದ್ಯ ಅಂತಿಮ ಹಂತದ ಕಾರ್ಯಾಚರಣೆ ನಡೆಯುತ್ತಿದೆ. ಶುಕ್ರವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಪೊಲೀಸ್ ವರಿಷ್ಠ ಎಂ. ನಾರಾಯಣ, ಜಿಪಂ ಸಿಇಒ ಈಶ್ವರಕುಮಾರ್‌ ಕಾಂದೂ ಅವರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಪರಿಶೀಲನೆ ನಡೆಸಿದರು.

ಈ ನಡುವೆ ದುರಂತದಲ್ಲಿ ಮತ್ತೊಂದು ಲಾರಿ ಕೂಡ ಕಣ್ಮರೆಯಾಗಿದೆ ಎನ್ನಲಾಗಿದ್ದು, ಆ ಲಾರಿ ಹಾಗೂ ಚಾಲಕ ಅರ್ಜುನ್‌ಗಾಗಿ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ನೌಕಾಪಡೆಗೆ ಮೊರೆ: ಗೋಕರ್ಣ ಸಮುದ್ರ ತೀರದಲ್ಲಿ ಗುರುವಾರ ಅಪರಿಚಿತ ಪುರುಷನ ಅರ್ಧ ಮೃತದೇಹ ಪತ್ತೆಯಾಗಿತ್ತು. ಇದೀಗ ಆ ಶವ ಕೂಡ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರದ್ದೇ ಎಂಬುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. 

ಈ ಮೂಲಕ ಘಟನೆಯಲ್ಲಿ ಮೃತಪಟ್ಟವರಲ್ಲಿ ಏಳು ಮಂದಿ ಶವ ಸಿಕ್ಕಂತಾಗಿದೆ. ಉಳಿದವರ ಶವ ಹುಡುಕಾಟಕ್ಕೆ ಭಾರೀ ಮಳೆ ಅಡ್ಡಿಯಾಗಿರುವುದರಿಂದ ಜಿಲ್ಲಾಡಳಿತ ಇದೀಗ ನೌಕಾಪಡೆ ಮೊರೆ ಹೋಗಿದೆ. ನೌಕಾಪಡೆ ಕಾರ್ಯಾಚರಣೆಗಿಳಿದಲ್ಲಿ ಹೆಲಿಕಾಪ್ಟರ್ ಹಾಗೂ ಆಧುನಿಕ ಬೋಟ್‌ಗಳ ಮೂಲಕ ಶೋಧ ಕಾರ್ಯ ಸುಲಭವಾಗಲಿದೆ.

 ಗುಡ್ಡ ಕುಸಿತದ ರಭಸಕ್ಕೆ ನದಿಗೆ ಬಿದ್ದು ತೇಲುತ್ತಿರುವ ಟ್ಯಾಂಕರ್‌ನಿಂದ ಅಡುಗೆ ಅನಿಲವನ್ನು ಖಾಲಿ ಮಾಡುವ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಎಂಆರ್‌ಪಿಎಲ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ನೌಕಾ ಸೇನೆಯ ತಜ್ಞರ ತಂಡ ಇದರಲ್ಲಿ ಪಾಲ್ಗೊಂಡಿತ್ತು. ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಟ್ಯಾಂಕರ್‌ ಅನ್ನು ಕ್ರೇನ್ ಬಳಸಿ ತೀರಕ್ಕೆ ಎಳೆತಂದು ಗ್ಯಾಸ್‌ ಅನ್ನು ನೀರಿಗೆ ಹಂತ-ಹಂತವಾಗಿ ಬಿಡಲಾಗಿದೆ. ಟ್ಯಾಂಕರ್‌ನಿಂದ ಸಂಪೂರ್ಣವಾಗಿ ಅನಿಲ ಖಾಲಿಯಾಗಿರುವ ಹಿನ್ನೆಲೆಯಲ್ಲಿ ತೀರ ಪ್ರದೇಶದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.- 

ಇಂದು ಎಚ್.ಡಿ. ಕುಮಾರಸ್ವಾಮಿ ಭೇಟಿ

ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಶನಿವಾರ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ನೇರವಾಗಿ ಶಿರೂರಿಗೆ ಭೇಟಿ ನೀಡುವ ಕುಮಾರಸ್ವಾಮಿ ಅಲ್ಲಿಂದ ಬೆಂಗಳೂರಿಗೆ ಮರಳಲಿದ್ದಾರೆ.