ಚಳ್ಳಕೆರೆಯಲ್ಲಿ ಮಳೆ: ರೈತರ ಮುಖದಲ್ಲಿ ಕಳೆ

| Published : Aug 15 2024, 01:58 AM IST

ಸಾರಾಂಶ

ಆ.೧೪ರ ಬೆಳಗಿನ ಜಾವ ವರುಣ ಕೃಪೆತೋರಿದ್ದು ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಮಳೆಯಿಂದ ಯಾವುದೇ ಜೀವಹಾನಿ ಇಲ್ಲವಾದರೂ ಒಂದೆರಡು ಕಡೆ ಹಳೆ ಮಾಳಿಗೆ ಮನೆ ಕುಸಿದು ಬಿದ್ದಿವೆ.

ಚಳ್ಳಕೆರೆ: ಕೆಲವು ದಿನಗಳಿಂದ ಬಿಡುವುಕೊಟ್ಟಿದ್ದ ಮಳೆರಾಯ ರೈತರಲ್ಲಿ ಆತಂಕ ಹುಟ್ಟಿಸಿದ್ದ. ತಾಲೂಕಿನಾದ್ಯಂತ ಪ್ರಮುಖ ಬೆಳೆ ಶೇಂಗಾ ಅಲ್ಪಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ಮಳೆಬಾರದೆ ಶೇಂಗಾ ಬಿತ್ತನೆ ಮಾಡಿದ್ದ ರೈತರು ಚಿಂತನೆಗೆ ಒಳಗಾಗಿದ್ದರು.

ಆದರೆ, ಆ.೧೪ರ ಬೆಳಗಿನ ಜಾವ ವರುಣ ಕೃಪೆತೋರಿದ್ದು ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಮಳೆಯಿಂದ ಯಾವುದೇ ಜೀವಹಾನಿ ಇಲ್ಲವಾದರೂ ಒಂದೆರಡು ಕಡೆ ಹಳೆ ಮಾಳಿಗೆ ಮನೆ ಕುಸಿದು ಬಿದ್ದಿವೆ. ಒಂದೇ ಹಂತದಲ್ಲಿ ೧೯೮.೧೮ ಮಿಮೀ. ಮಳೆಯಾಗಿದ್ದು, ರೈತರು ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ.

ತಾಲೂಕಿನಾದ್ಯಂತ ಬುಧವಾರ ಬೆಳಗಿನ ಜಾವ ಬಿದ್ದ ಮಳೆ ಪ್ರಮಾಣ ನಾಯಕನಹಟ್ಟಿ-೫೯.೦೬, ಚಳ್ಳಕೆರೆ-೫೪.೦೦, ಪರಶುರಾಮಪುರ-೪೬.೦೬, ತಳಕು-೨೨.೦೪, ದೇವರಮರಿಕುಂಟೆ-೧೭.೦೨ ಮಿಮೀ. ಮಳೆಯಾಗಿದ್ದು ಒಟ್ಟು ೧೯೮.೧೮ ಮಳೆಯಾಗಿದೆ. ತಳಕು ಹೋಬಳಿ ದಾರ‍್ಲಹಳ್ಳಿ ಗ್ರಾಮದ ಎಸ್.ಟಿ.ಶಂಕರಪ್ಪ ಎಂಬುವವರ ಮನೆ ಗೋಡೆ ಕುಸಿದು ಸುಮಾರು ₹೫೦ ಸಾವಿರ ನಷ್ಟ ಸಂಭವಿಸಿದೆ. ಕಸಬಾ ಹೋಬಳಿ ಹೊಸಮುಚ್ಚುಗುಂಟೆ ಗ್ರಾಮದ ಸುಶೀಲಮ್ಮ ಎಂಬುವವರ ಮನೆ ಮೇಲ್ಛಾವಣೆ ಕುಸಿದು ₹೩೦ ಸಾವಿರ ನಷ್ಟ ಸಂಭವಿಸಿದೆ. ತಾಲೂಕಿನ ಕಾಲುವೇಹಳ್ಳಿ ಗ್ರಾಮದ ಜಾಜೂರು ಹನುಮಂತಪ್ಪನವರ ಮನೆಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸೂಕ್ತ ಸಿಸಿ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಜನರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.