ಗ್ರಾಮಾಂತರದಲ್ಲೂ ಮಳೆಯಬ್ಬರ: ಹೈರಾಣಾದ ಜನತೆ

| Published : May 20 2024, 01:32 AM IST

ಸಾರಾಂಶ

ಶನಿವಾರ ಮತ್ತು ಭಾನುವಾರ ನಗರ ಮತ್ತು ಗ್ರಾಮಾಂತರದಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಜನತೆ ಹೈರಾಣಾಗಿದ್ದಾರೆ.

ಚಿಕ್ಕಬಳ್ಳಾಪುರ: ಶನಿವಾರ ಮತ್ತು ಭಾನುವಾರ ನಗರ ಮತ್ತು ಗ್ರಾಮಾಂತರದಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಜನತೆ ಹೈರಾಣಾಗಿದ್ದಾರೆ. ನಗರದಲ್ಲಿ ದಿಢೀರನೇ ಸುರಿದ ಜೋರು ಮಳೆಯಿಂದ ಮಳೆ ನೀರು ರಸ್ತೆಯ ಮೇಲೆಯೇ ಹರಿದು ಸಮಸ್ಯೆ ಸೃಷಿಸುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ಇಡೀ ಚರಂಡಿ ವ್ಯವಸ್ಥೆ ಸೇರಿದಂತೆ ರಾಜಕಾಲುವೆಗಳು ಸರಿಯಿಲ್ಲ ಎಂಬುದನ್ನು ಸಾಬೀತು ಮಾಡಿದೆ.

ಜಿಲ್ಲಾ ಕೇಂದ್ರದಲ್ಲಿ ದೀಢೀರನೇ ಸುರಿದ ಮಳೆಗೆ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದ್ದು, ಅಲ್ಲದೆ ಬಿ.ಬಿ ರಸ್ತೆ ಎಂಜಿ ರಸ್ತೆಯನ್ನು ಹೊರತುಪಡಿಸಿ ಇನ್ನುಳಿದ ರಸ್ತೆಗಳು ಮಳೆ ಸುರಿದಾಗಲೆಲ್ಲ ರಸ್ತೆಯಲ್ಲಿ ಬಿದ್ದಿರುವ ಹಳ್ಳ, ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ಇದರಿಂದ ವಾಹನ ಸವಾರರು, ಪಾದಾಚಾರಿಗಳು ಎಲ್ಲಿ ಗುಂಡಿಗಳಿವೆ, ಎಲ್ಲಿ ರಸ್ತೆಯಿದೆ ಎಂಬುದು ಅರಿಯದೆ ಬಿದ್ದು ಎದ್ದು ಹೋಗುತ್ತಿದ್ದ ಸಾಮಾನ್ಯವಾಗಿತ್ತು.

ಉರುಳಿ ಬಿದ್ದ ಬೃಹತ್ ಮರ: ಬಿರುಗಾಳಿ ಸಹಿತ ಭಾರಿ ಮಳೆಗೆ ನಗರದ ಸಿಎಸ್‌ಐ ರಸ್ತೆಯ ಹಳೆಯ ಗುಡ್‌ಶಫರ್ಡ್ ಶಾಲೆಯ ಆವರಣದಲ್ಲಿನ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಇದರಿಂದಾಗಿ ಕಾರೊಂದು ಸಂಪೂರ್ಣ ಜಖಂಗೊಂಡು, ಇನ್ನಿತರೆ ವಾಹನಗಳಿಗೆ ಹಾನಿಯಾಗಿದೆ.

ಜಿಲ್ಲಾ ಕೇಂದ್ರವೂ ಆದ ಚಿಕ್ಕಬಳ್ಳಾಪುರ ನಗರದ 08 ಮತ್ತು 09 ವಾರ್ಡ್ ಗಳಲ್ಲಿ‌ ಮಳೆಗಾಲದಲ್ಲಿ ಮನೆಗಳಿಗೆ ಚರಂಡಿ ಮತ್ತು ಯುಜಿಡಿ ನೀರು ನುಗ್ಗಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ.

ಸಮಸ್ಯೆಗಳನ್ನು ಬಗ್ಗೆ ಗಂಭೀರವಾಗಿ ಪರಿಗಣಿಸುವವರಿಲ್ಲ ಎಂದು ಇಲ್ಲಿನ ಜನ ಗೋಳಾತ್ತಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರೀಕರ ಪರಿಸ್ಥಿತಿಯಂತೂ ಹೇಳತೀರದು. ಪ್ರತಿ ಮಳೆಗಾಲದಲ್ಲೂ ಇದೇ ದುಸ್ಥಿತಿ. ಮನೆ ಒಳಗೆ ನುಗ್ಗಿದ ಯುಜಿಡಿ, ಚರಂಡಿ ನೀರನ್ನು ಹೊರ ಹಾಕಿ ಹಾಕಿ ಹೈರಾಣಾಗಿ ಹೋಗಿದ್ದಾರೆ. ಕಳೆದ ಮಳೆಗಾಲದಲ್ಲಿ ಸಮಸ್ಯೆ ಆದಾಗ ಆಗಿನ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಭೇಟಿ‌ ನೀಡಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿನ ಸಮಸ್ಯೆ ನಿವಾರಣೆಗಾಗಿ ಸೂಕ್ತ ಕಾಮಗಾರಿ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಕಳುಹಿಸುವಂತೆ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿ ಭರವಸೆ ನೀಡಿ ಹೋಗಿದ್ದರು.

ಯೋಜನಾ ವರದಿ ಸರ್ಕಾರಕ್ಕೆ ಹೋಗಿದೆಯೋ ಇಲ್ಲವೋ ತಿಳಿದಿಲ್ಲ. ಸಮಸ್ಯೆ ಮಾತ್ರ ಹಾಗೆಯೇ ಇದೆ ಅಥವಾ ಈ ವರ್ಷ ಮತ್ತಷ್ಟು ಗಂಭೀರವಾಗುವ ಜೊತೆಗೆ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಈ ಕಡೆ ಜನಪ್ರತಿನಿಧಿಗಳೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಮತ್ತೊಂದು ಕಡೆ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ಜನ ತಮ್ಮ ಅಳಲು ತೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಈ ಭಾಗದಲ್ಲಿ ಯುಜಿಡಿ ಗೋಳಂತೂ ಪದಗಳಲ್ಲಿ ಹೇಳಲಾಗದು. ಪ್ರತಿ ವರ್ಷವೂ ಬರುವ ಮಳೆ ನೀರಿನ ಸಮಸ್ಯೆ ನಗರಸಭೆಗೆ ಗೊತ್ತಾಗುವುದಿಲ್ಲವೇ? ಮುನ್ನೆಚ್ಚರಿಕಾ ಕ್ರಮಗಳನ್ನು ಏಕೆ ಕೈಗೊಳ್ಳುವುದಿಲ್ಲ. ಯುಜಿಡಿ, ಚರಂಡಿ‌ನೀರಿನ ದುರ್ವಾಸನೆ ಮಧ್ಯೆ ಊಟ ತಿಂಡಿ ಮಾಡುವುದು ಹೇಗೆ. ನರಕವೂ ಒಂದೇ ಮಳೆಗಾಲದಲ್ಲಿ 8 ಮತ್ತು 9 ನೇ ವಾರ್ಡುಗಳೂ ಒಂದೇ ಆಗಿದೆ. ನಿಜಕ್ಕೂ ದುರಂತ,ಶೋಚನೀಯ. ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. .