ದ.ಕ. ದಲ್ಲಿ ಕಾಣಿಸಿದ ಬೇಸಿಗೆ ಮಳೆ
KannadaprabhaNewsNetwork | Published : Apr 14 2024, 01:48 AM IST
ದ.ಕ. ದಲ್ಲಿ ಕಾಣಿಸಿದ ಬೇಸಿಗೆ ಮಳೆ
ಸಾರಾಂಶ
ರಾತ್ರಿ ಹೊತ್ತು ಸೆಕೆ ಸ್ವಲ್ಪ ದೂರವಾಗಿದ್ದು, ತಂಪಿನ ಅನುಭವ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ವಿಪರೀತ ಸೆಖೆ ಕಂಡುಬಂದಿತ್ತು.
ಮಂಗಳೂರು: ಭಾರಿ ಬಿಸಿಲಿನಿಂದ ಬಸವಳಿದಿದ್ದ ದ.ಕ. ಜಿಲ್ಲೆಯ ಜನತೆಗೆ ಶನಿವಾರ ರಾತ್ರಿ ಸುರಿದ ಬೇಸಗೆ ಮಳೆ ತುಸು ತಂಪೆರೆದಿದೆ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ರಾತ್ರಿ ಹೊತ್ತು ಸೆಕೆ ಸ್ವಲ್ಪ ದೂರವಾಗಿದ್ದು, ತಂಪಿನ ಅನುಭವ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ವಿಪರೀತ ಸೆಖೆ ಕಂಡುಬಂದಿತ್ತು.ಉಪ್ಪಿನಂಗಡಿ ಪರಿಸರದಲ್ಲಿ ಮಳೆ: ಶನಿವಾರ ರಾತ್ರಿ ಉಪ್ಪಿನಂಗಡಿ ಪರಿಸರದಲ್ಲಿ ಕೆಲ ಕಾಲ ಮಳೆ ಸುರಿದು ತಂಪೆರೆಯಿತು. ಸಾಯಂಕಾಲದ ವೇಳೆ ಶಿರಾಡಿಯಿಂದ ಪ್ರಾರಂಭವಾದ ಮಳೆ ರಾತ್ರಿ ವೇಳೆ ನೆಲ್ಯಾಡಿ, ಬಜತ್ತೂರು, ಉಪ್ಪಿನಂಗಡಿ ಪರಿಸರದಲ್ಲಿ ಸುರಿದು ತಂಪೆರೆಯಿತು. ಗುಡುಗು ಸಹಿತ ಮಳೆಯೊಂದಿಗೆ ವಿದ್ಯುತ್ ಕೂಡಾ ಕಣ್ಮರೆಯಾಗಿತ್ತು.ಬೆಳ್ತಂಗಡಿ ತಾಲೂಕಿನ ಕೆಲವೆಡೆ ಮಳೆ
ಬೆಳ್ತಂಗಡಿ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಶನಿವಾರ ಸಂಜೆ ಮಳೆಯಾಗಿದೆ. ಅಳದಂಗಡಿ, ನಡ, ಮಲವಂತಿಗೆ ಮೊದಲಾದ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಉಳಿದ ಕಡೆಗಳಲ್ಲಿ ಸಾಮಾನ್ಯ ಹಾಗೂ ತುಂತುರು ಮಳೆ ಬಿದ್ದಿದೆ.ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ನಿಡಿಗಲ್ ನಿಂದ ಸೋಮಂತಡ್ಕದ ವರೆಗಿನ ನಾಲ್ಕು ಕಿಮೀ ರಸ್ತೆ ಸಂಪೂರ್ಣ ಅಗೆದು ಹಾಕಲಾಗಿದ್ದು ಈ ಪ್ರದೇಶದಲ್ಲಿ ಸ್ವಲ್ಪ ಮಳೆಯು ಸುರಿದ ಪರಿಣಾಮವಾಗಿ, ರಸ್ತೆ ಭಾರಿ ಜಾರುತ್ತಿದ್ದು ವಾಹನ ಸವಾರರು ಪರದಾಟ ನಡೆಸಿದರು. ಕೆಲವು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದ ಘಟನೆಯೂ ನಡೆಯಿತು.