ಬೆಂಗ್ಳೂರು ಸೇರಿ 7 ಜಿಲ್ಲೆಯಲ್ಲಿ ಭಾರಿ ಮಳೆ

| Published : Jun 03 2024, 01:15 AM IST / Updated: Jun 03 2024, 08:10 AM IST

ಬೆಂಗ್ಳೂರು ಸೇರಿ 7 ಜಿಲ್ಲೆಯಲ್ಲಿ ಭಾರಿ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮುಂಗಾರು ಮಳೆಯಿಂದಾಗಿ ಇನ್ನೊಂದು ವಾರ ಭರ್ಜರಿ ವರ್ಷಧಾರೆ ಸುರಿಯಲಿದ್ದು, ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಮೆಟ್ರೋ ಮೇಲ್ಸೇತುವೆ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತಗೊಂಡಿದೆ

 ಬೆಂಗಳೂರು :  ಮುಂಗಾರು ಆಗಮನದ ಬೆನ್ನಲ್ಲೇ ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದ್ದು, ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು ಸೇರಿ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ನಂತರ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಬಿರುಗಾಳಿ ಸಹಿತ ಮಳೆಗೆ 15ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಬಿದ್ದಿವೆ. ಮಹಾಲಕ್ಷ್ಮೀ ಲೇ ಔಟ್‌ನಲ್ಲಿ ಮರ ಬಿದ್ದು ಆಟೋವೊಂದು ಜಖಂಗೊಂಡಿದೆ. ಶೇಷಾದ್ರಿಪುರಂ ಅಂಡರ್‌ಪಾಸ್‌ ಜಲಾವೃತವಾಗಿದ್ದು, ಬಸ್ಸೊಂದು ಅರ್ಧ ಮುಳುಗಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆ.ಆರ್‌.ಸರ್ಕಲ್‌ ಅಂಡರ್‌ಪಾಸ್‌ ಬಳಿ ನೀರಲ್ಲಿ ಬೈಕೊಂದು ಮುಳುಗಿದ್ದು, ಅದೃಷ್ಟವಶಾತ್‌ ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂಜಿ ರೋಡ್‌ನ ಟ್ರಿನಿಟಿ ಸರ್ಕಲ್‌ ಬಳಿ ಮೆಟ್ರೋ ರೈಲಿನ ಹಳಿಗಳ ಮೇಲೆ ಮರ ಉರುಳಿ ಬಿದ್ದು, ಎಂ.ಜಿ.ರೋಡ್‌ - ಇಂದಿರಾನಗರ ನಡುವಿನ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ರಾಮನಗರ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಗಬಸವನದೊಡ್ಡಿ ಮೇಲ್ಸೇತುವೆ ಬಳಿ ನೀರು ತುಂಬಿಕೊಂಡು 5 ಕಿ.ಮೀ.ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಶೃಂಗೇರಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಉತ್ತಮ ಮಳೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಹಲವೆಡೆ 2 ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಶ್ರೀರಂಗಪಟ್ಟಣದಲ್ಲಿ ಹೋಟೆಲ್‌ ವೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. 

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿ ಬೈಕ್‌ ಮೇಲೆ ಮರ ಬಿದ್ದು, ಬೈಕ್‌ ಸವಾರನ ಕಾಲು ಮುರಿದಿದೆ. ಮಧುಗಿರಿಯಲ್ಲಿ ಸಿಡಿಲು ಬಡಿದು ಆಟೋಮೊಬೈಲ್‌ ಅಂಗಡಿಯೊಂದರ ಗೋದಾಮು ಸಂಪೂರ್ಣ ಸುಟ್ಟು ಭಸ್ಮವಾಗಿದೆ. 8 ಲಕ್ಷ ರು.ಗೂ ಹೆಚ್ಚಿನ ಮೌಲ್ಯದ ವಸ್ತುಗಳು ನಾಶವಾಗಿವೆ.