ದಾವಣಗೆರೆಯಲ್ಲಿ ಮತ್ತೆ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

| Published : May 21 2025, 02:10 AM IST

ಸಾರಾಂಶ

ಮುಂಗಾರು ಪೂರ್ವದ ಮಳೆಯ ಆರ್ಭಟ ಜಿಲ್ಲೆಯಲ್ಲಿ ಭರ್ಜರಿಯಾಗಿಯೇ ಶುರುವಾಗಿದೆ. ಮಂಗಳವಾರ ಇಡೀ ದಿನ ನಗರ ಜಿಲ್ಲಾದ್ಯಂತ ದಟ್ಟಮೋಡಗಳು ಆವರಿಸಿದ್ದವು. ಮಧ್ಯಾಹ್ನ ಸುಮಾರು 1 ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾದರೆ, ಆಗಾಗ ತುಂತುರು ಸುರಿಯುತ್ತಿದೆ.

- ಹವಾಮಾನ ಇಲಾಖೆಯಿಂದ ಯಲ್ಲೋ ಅಲರ್ಟ್ । ಇನ್ನೂ 4 ದಿನ ಮಳೆಯಾಗುವ ಸೂಚನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಗಾರು ಪೂರ್ವದ ಮಳೆಯ ಆರ್ಭಟ ಜಿಲ್ಲೆಯಲ್ಲಿ ಭರ್ಜರಿಯಾಗಿಯೇ ಶುರುವಾಗಿದೆ. ಮಂಗಳವಾರ ಇಡೀ ದಿನ ನಗರ ಜಿಲ್ಲಾದ್ಯಂತ ದಟ್ಟಮೋಡಗಳು ಆವರಿಸಿದ್ದವು. ಮಧ್ಯಾಹ್ನ ಸುಮಾರು 1 ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾದರೆ, ಆಗಾಗ ತುಂತುರು ಸುರಿಯುತ್ತಿದೆ.

ನಗರ, ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದಲೇ ಅಲ್ಲಲ್ಲಿ ತುಂತುರು ಮಳೆ ಆಗುತ್ತಿತ್ತು. 11.30ಕ್ಕೆ ಶುರುವಾದ ಮಳೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿದಿದ್ದಲ್ಲದೇ, ಗುಡುಗಿನ ಆರ್ಭಟದೊಂದಿಗೆ ಒಂದೇ ಕ್ಷಣಕ್ಕೆ ಜೋರಾಗಿ, ಜನರು ಕಂಗಾಲಾಗುವಂತೆ ಮಾಡಿತು. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ತಗ್ಗು ಪ್ರದೇಶ, ಅಂಗಡಿ ಮುಂಗ್ಗಟ್ಟು, ಕಚೇರಿಗಳಿಗೆ, ನೆಲ ಮಹಡಿ ಕಟ್ಟಡಗಳಿಗೆ ನೀರು ನುಗ್ಗಿತು. ಚರಂಡಿಗಳು, ದೊಡ್ಡ ಚರಂಡಿಗಳು ತುಂಬಿ ಹರಿಯಲಾರಂಭಿಸಿದವು. ವಿನೋಬ ನಗರ, ಯಲ್ಲಮ್ಮ ನಗರ, ಪಿಸಾಳೆ ಕಾಂಪೌಂಡ್, ಎಸ್‌ಪಿಎಸ್ ನಗರ, ಭಗತ್ ಸಿಂಗ್ ನಗರ, ಲೇಬರ್ ಕಾಲನಿ, ಕೆಟಿಜೆ ನಗರ, ನಿಟುವಳ್ಳಿ, ಬೇತೂರು ರಸ್ತೆ, ಹೊಸ ಖಾಸಗಿ ಬಡಾವಣೆಗಳು, ಗ್ರಾಮೀಣ ಪ್ರದೇಶ ಸೇರಿದಂತೆ ತಗ್ಗುಪ್ರದೇಶದ ಮನೆಗಳು, ರಸ್ತೆಗಳು ಜಲಾವೃತವಾಗಿ ಜನರು ಪರದಾಡಿದರು.

ಮನೆಗೆ ನೀರು ನುಗ್ಗಿದ್ದರಿಂದ ಜನರು ನೀರನ್ನು ಹೊರಹಾಕಲು ಮನೆ ಮಂದಿಯೆಲ್ಲಾ ಪರದಾಡಿದರು. ಸ್ವಾಮಿ ವಿವೇಕಾನಂದ ಬಡಾವಣೆ, ಬೂದಾಳ್ ರಸ್ತೆ, ಮತ್ತಿತರೆ ತಗ್ಗು ಪ್ರದೇಶಗಳು ಕೆರೆಯಂತಾಗಿದ್ದವು. ಪಾದಚಾರಿಗಳು, ಸೈಕಲ್, ದ್ವಿಚಕ್ರ ವಾಹನ ಸವಾರರು, ಕಾರು ಇತರೇ ವಾಹನಗಳ ಸವಾರರು, ಚಾಲಕರ ಪರದಾಟ ಮುಂದುವರಿದಿತ್ತು. ನಿನ್ನೆ ಸಂಜೆಯಷ್ಟೇ ಜೋರು ಮಳೆಯಾಗಿತ್ತು. ಮಂಗಳವಾರ ಬೆಳಗ್ಗೆಯೇ ಜೋರು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಯಿತು.

ಇನ್ನು ಪಾಲಿಕೆ ಮುಂಭಾಗದ ರೈಲ್ವೆ ಅಂಡರ್ ಪಾಸ್, ಲಿಂಗೇಶ್ವರ ದೇವಸ್ಥಾನ ಬಳಿ ಹೊಸ ಅಂಡರ್ ಪಾಸ್‌ಗೆ ನೀರು ನುಗ್ಗಿದ್ದರಿಂದ ವಾಹನ ಸವಾರರು ಮುಂದೆ ಸಾಗಲು ಪರದಾಡಿದರು. ಮಾಯಕೊಂಡ, ಬಸವಾಪಟ್ಟಣ, ಸಂತೇಬೆನ್ನೂರು, ಕಡರನಾಯ್ಕನಹಳ್ಳಿ, ಆನಗೋಡು ಹೋಬಳಿ, ನ್ಯಾಮತಿ ತಾಲೂಕಿನಲ್ಲೂ ಜೋರು ಮಳೆಯಾಗಿದೆ. ಹರಿಹರ ತಾಲೂಕಿನಲ್ಲಿ ಮಳೆಯ ಆರ್ಭಟ ಕಡಿಮೆಯಾಗಿತ್ತು.

ಬಸವಾಪಟ್ಟಣದಲ್ಲಿ ಧಾರಾಕಾರ ಳೆಯಿಂದಾಗಿ ಬಸ್‌ ನಿಲ್ದಾಣ ಜಲಾವೃತವಾಗಿತ್ತು. ಭತ್ತದ ಬೆಳೆ ಕೈಗೆ ಬಂದಿದ್ದು, ಭತ್ತ ಕಟಾವಿಗೆ ಕಟಾವು ಯಂತ್ರ ತರಿಸಿದ್ದ ರೈತರು ಮಳೆಯ ಆರ್ಭಟ ನೋಡಿ, ಏನು ಮಾಡಬೇಕೆಂಬುದೇ ತೋಚದಂತಾಗಿದ್ದರು. ಮಳೆ, ಗಾಳಿಯ ಹೊಡೆತಕ್ಕೆ ಭತ್ತದ ಬೆಳೆ ಚಾಪೆಯಂತೆ ನೆಲಕ್ಕೊರಗಿದ್ದು, ರೈತರು ಕಂಗಾಲಾಗಿದ್ದಾರೆ. ಕೆಲ ದಿನಗಳ ಮುಂಚೆಯೇ ಭತ್ತ ಕಟಾವು ಮಾಡಿಸಿದ್ದ ರೈತರು ಭತ್ತ ಒಣಗಿಸಲಾಗದೇ, ತೇವಾಂಶ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶದ ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುವುದರಲ್ಲಿ ತೊಡಗಿದ್ದಾರೆ.

- - -

(ಬಾಕ್ಸ್‌) * ದಾವಣಗೆರೆ ಜಿಲ್ಲೆಗೂ ಯಲ್ಲೋ ಅಲರ್ಟ್ ಹವಾಮಾನ ಇಲಾಖೆ ದಾವಣಗೆರೆ ಜಿಲ್ಲೆಯಲ್ಲೂ ಯಲ್ಲೋ ಅಲರ್ಟ್ ಘೋಷಿಸಿದೆ. ಮೇ 24ರವರೆಗೂ ಜಿಲ್ಲಾದ್ಯಂತ ಶೀತ ಗಾಳಿ, ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇವೆ. ಮಂಗಳವಾರ ರಾತ್ರಿಯೂ ದಟ್ಟಮೋಡಗಳು ಆವರಿಸಿ, ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ನಾಲ್ಕೈದು ದಿನಗಳ ಹಿಂದೆ ವಿಪರೀತ ಸೆಖೆಯಿಂದ ಬಸವಳಿದಿದ್ದ ಜಿಲ್ಲೆಯ ಜನರಿಗೆ 3-4 ದಿನ ಸುರಿದ ಸತತ ಮಳೆಯಿಂದಾಗಿ ವಿಪರೀತ ಚಳಿ ಅನುಭವವಾಗುತ್ತಿದೆ. ಆ ಮೂಲಕ ಮಲೆನಾಡಿನ ವಾತಾವರಣ, ಆಷಾಢ ಮಾಸದ ವಾತಾವರಣ ನಿರ್ಮಾಣವಾಗಿತ್ತು.

- - -

-20ಕೆಡಿವಿಜಿ17, 18: ಭಾರಿ ಮಳೆಯಿಂದಾಗಿ ದಾವಣಗೆರೆಯ ಹಳೇ ಪಿ.ಬಿ. ರಸ್ತೆಯಲ್ಲಿ ನದಿಯಂತೆ ನೀರು ಹರಿಯುತ್ತಿರುವುದ. -20ಕೆಡಿವಿಜಿ19: ದಾವಣಗೆರೆ ವಿನೋಬ ನಗರದ ನರಹರಿ ಶೇಟ್ ಭವನ ಬಳಿ ವಿಪರೀತ ಮಳೆಯಿಂದಾಗಿ ರಾಜ ಕಾಲುವೆ ತುಂಬಿ, ಕೆರೆಯಂತಹ ವಾತಾವರಣ ನಿರ್ಮಾಣವಾಗಿತ್ತು.

-20ಕೆಡಿವಿಜಿ20: ದಾವಣಗೆರೆ ವಿನೋಬ ನಗರದ ನರಹರಿ ಶೇಟ್ ಭವನದ ಬಳಿ ವಿಪರೀತ ಮಳೆಯಿಂದಾಗಿ ಹಾಪ್‌ಕಾಮ್ಸ್ ಅಂಗಡಿ, ಆಟೋ ರಿಕ್ಷಾ, ವಾಹನ ಜಲಾವೃತವಾಗಿರುವುದು.

-20ಕೆಡಿವಿಜಿ21: ಹಳೆ ಪಿ.ಬಿ. ರಸ್ತೆ ಬಳಿ ಮಳೆನೀರಿನಲ್ಲೇ ಬೈಕ್ ಸವಾರನೊಬ್ಬ ವೇಗವಾಗಿ ಸಾಗುತ್ತಿರುವುದು. -20ಕೆಡಿವಿಜಿ22: ದ್ವಿಚಕ್ರ ವಾಹನ ಸವಾರರು ಸುರಿಯುತ್ತಿರುವ ಮಳೆಯಲ್ಲೇ ಸಾಗುತ್ತಿರುವುದು. -20ಕೆಡಿವಿಜಿ23: ಎವಿಕೆ ಕಾಲೇಜು ಬಳಿ ಯುವತಿ ಕೊಡೆ ಹಿಡಿದು ರಸ್ತೆ ದಾಟುತ್ತಿರುವುದು.