ಕುಂದಗೋಳದಲ್ಲಿ ತಂಪೆರೆದ ವರುಣ

| Published : May 13 2024, 01:01 AM IST

ಸಾರಾಂಶ

ಮಧ್ಯಾಹ್ನದ ವೇಳೆಗೆ ಆರಂಭಗೊಂಡ ಬಿರುಗಾಳಿ ಸಹಿತ ಮಳೆಗೆ ಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿ ಗಿಡಮರಗಳು ಧರೆಗುರುಳಿವೆ. ಹಲವು ಗಂಟೆಗಳ ಕಾಲ ಕಾಲ ವಿದ್ಯುತ್ ವ್ಯತ್ಯಯವಾಯಿತು.

ಕನ್ನಡಪ್ರಭ ವಾರ್ತೆ ಕುಂದಗೋಳ

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಪಟ್ಟಣದ ಜನರಿಗೆ ಭಾನುವಾರ ಭಾರಿ ಗಾಳಿ, ಗುಡುಗು ಸಮೇತ ಆಲಿಕಲ್ಲು ಮಳೆ ಸುರಿಯುವ ಮೂಲಕ ತಂಪನ್ನೆರಿಸಿತು.

ಮಧ್ಯಾಹ್ನದ ವೇಳೆಗೆ ಆರಂಭಗೊಂಡ ಬಿರುಗಾಳಿ ಸಹಿತ ಮಳೆಗೆ ಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿ ಗಿಡಮರಗಳು ಧರೆಗುರುಳಿವೆ. ಹಲವು ಗಂಟೆಗಳ ಕಾಲ ಕಾಲ ವಿದ್ಯುತ್ ವ್ಯತ್ಯಯವಾಯಿತು. ಧಿಡೀರನೇ ಆಗಮಿಸಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ ಜನತೆ ತೊಂದರೆ ಅನುಭವಿಸುವಂತಾಯಿತು.

ಮಳೆಯಿಂದಾಗಿ ಪಟ್ಟಣದ ಹಲವು ಕಡೆಗಳಲ್ಲಿ ಚರಂಡಿ ಬಂದಾಗಿ ನೀರೆಲ್ಲ ರಸ್ತೆ ಮೇಲೆ ಹರಿದು ತೊಂದರೆ ಅನುಭವಿಸುವಂತಾಯಿತು. ಇಲ್ಲಿನ ಸಂಗಮೇಶ್ವರ ನಗರದಲ್ಲಿರುವ ಯಲ್ಲಪ್ಪ ಭೋವಿ ಅವರ ಮನೆಯ ಚಾವಣಿಯ ಮೇಲೆ ಗಿಡ ಬಿದ್ದ ಪರಿಣಾಮ ಚಾವಣಿಗೆ ಹಾಕಿದ್ದ ತಗಡುಗಳೆಲ್ಲ ಹಾಳಾಗಿ ಮಳೆಯ ನೀರೆಲ್ಲ ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.ಸಿಡಿಲಿಗೆ ಜಾನುವಾರು ಸಾವು

ಧಾರವಾಡ: ಶನಿವಾರ ಸಂಜೆ ಸುರಿದ ಗುಡುಗು-ಸಿಡಿಲಿನ ಭಾರೀ ಮಳೆಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಹಾನಿಯಾಗಿದೆ. ಹುಬ್ಬಳ್ಳಿ ತಾಲೂಕು ಛಬ್ಬಿಯಲ್ಲಿ ಸಿಡಿಲಿಗೆ ಒಂದು ಜಾನುವಾರು ಮೃತಪಟ್ಟಿದ್ದು, ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಿಸಿದ ಯಾವುದೇ ಹಾನಿಯಾಗಿಲ್ಲ. ಆದರೆ, ಮುಂಗಾರು ಹಂಗಾಮಿಗೆ ಮಳೆ ಪೂರಕವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಭಾನುವಾರವೂ ಮಳೆ ನಿರೀಕ್ಷೆ ಮಾಡಲಾಗಿತ್ತು. ಬೆಳಗ್ಗೆ ಮೋಡ ಮುಸುಕಿದ ವಾತಾವರಣ ಇದ್ದು ಮಧ್ಯಾಹ್ನ ಎಂದಿನಂತೆ ಬಿಸಿಲು ಕಾಣಿಸಿಕೊಂಡಿತು. ಸಂಜೆ ಮೋಡ ಕವಿದು ಮಳೆ ಬರುವ ನಿರೀಕ್ಷೆ ಬರೀ ಗಾಳಿಗೆ ಮಾತ್ರ ಸೀಮಿತಗೊಂಡಿತು.