ಜಿಲ್ಲೆಯಲ್ಲಿ ಆಶಾಢಕ್ಕೂ ಮೊದಲೇ ಸೋನೆ ಮಳೆ

| Published : May 20 2025, 11:50 PM IST / Updated: May 20 2025, 11:51 PM IST

ಸಾರಾಂಶ

ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಆಶಾಢದ ಅನುಭವವಾಗುತ್ತದೆ. ಅಂದರೆ ಜಿಟಿಜಿಟಿ ಸುರಿಯುವ ಸೋನೆ ಮಳೆ, ಚುಮುಚುಮು ಚಳಿ, ಹೊರಗೆ ಕಾಲಿಟ್ಟರೆ ಕೆಸರು. ಆದರೆ ಇದೆಲ್ಲಾ ಅನುಭವ ಮೇ ತಿಂಗಳಲ್ಲೇ ಆಗುತ್ತಿದೆ. ಕಾರಣ ಹಠಾತ್ತಾಗಿ ಶುರುವಾಗಿರುವ ಸೋನೆ ಮಳೆ ಜುಲೈ ತಿಂಗಳ ಆಶಾಢದ ಅನುಭವವನ್ನು ಮೇ ತಿಂಗಳಲ್ಲೇ ಉಣಬಡಿಸುತ್ತಿದೆ. ಕೆರೆಕಟ್ಟೆಗಳೇ ಭರ್ತಿಯಾಗದೆ ಸೋನೆ ಮಳೆಯ ಜಿನುಗುವ ನೀರಿಗೆ ಭತ್ತ ನಾಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ವರ್ಷ ಬತ್ತದ ಉತ್ಪಾದನೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಹಾಸನ

ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಆಶಾಢದ ಅನುಭವವಾಗುತ್ತದೆ. ಅಂದರೆ ಜಿಟಿಜಿಟಿ ಸುರಿಯುವ ಸೋನೆ ಮಳೆ, ಚುಮುಚುಮು ಚಳಿ, ಹೊರಗೆ ಕಾಲಿಟ್ಟರೆ ಕೆಸರು. ಆದರೆ ಇದೆಲ್ಲಾ ಅನುಭವ ಮೇ ತಿಂಗಳಲ್ಲೇ ಆಗುತ್ತಿದೆ. ಕಾರಣ ಹಠಾತ್ತಾಗಿ ಶುರುವಾಗಿರುವ ಸೋನೆ ಮಳೆ ಜುಲೈ ತಿಂಗಳ ಆಶಾಢದ ಅನುಭವವನ್ನು ಮೇ ತಿಂಗಳಲ್ಲೇ ಉಣಬಡಿಸುತ್ತಿದೆ.

ಕಳೆದ ಆರೇಳು ವರ್ಷಗಳಿಂದ ಸೋನೆ ಮಳೆ ಶುರುವಾಗುತ್ತಿದ್ದುದೇ ಜೂನ್‌ ಮಧ್ಯ ಇಲ್ಲವೇ ಜೂನ್‌ ಅಂತ್ಯದಲ್ಲಿ. ಕೆಲವೊಮ್ಮೆ ಸೋನೆ ಮಳೆಯೇ ಕೈಕೊಟ್ಟ ಉದಾಹರಣೆಯೂ ಇದೆ. ಸಾಮಾನ್ಯವಾಗಿ ಮುಂಗಾರು ಎಂದರೆ ಮಾರ್ಚ್‌ ತಿಂಗಳಲ್ಲಿ ಮೊದಲ ಮಳೆಯಾಗುತ್ತದೆ. ಮಲೆನಾಡು ಭಾಗದಲ್ಲಿ ಆಗುವ ಈ ಮಳೆಯನ್ನು ಹೂ ಮಳೆ ಎನ್ನುತ್ತಾರೆ. ಏಕೆಂದರೆ ಈ ಮಳೆ ಬಂದ ನಂತರವೆ ಕಾಫಿ ತೋಟಗಳು ಹೂವಾಗುತ್ತವೆ. ಈ ಮಳೆ ಆಗದಿದ್ದರೆ ನೀರಿನ ಮೂಲಗಳಿಂದ ತೋಟಗಳಿಗೆ ನೀರು ಸಿಂಪರಣೆ ಮಾಡಬೇಕಾಗುತ್ತದೆ. ಮಾರ್ಚ್‌ನಿಂದ ಆರಂಭವಾಗುವ ಅಡ್ಡ ಮಳೆ (ಬಿರುಸಿನಿಂದ ಕೂಡಿದ ಮಳೆ) ಗಳು ಕೆರೆ ಕಟ್ಟೆಯನ್ನು ತುಂಬಿಸುತ್ತವೆ. ಮಾರ್ಚ್‌ನಿಂದ ಜೂನ್‌ ಮಧ್ಯ ಭಾಗದವರೆಗೂ ಈ ಅಡ್ಡ ಮಳೆಗಳು ಕೆರೆಕಟ್ಟೆ ಹಾಗೈ ಜಲಾಶಯಗಳನ್ನು ಭರ್ತಿಗೊಳಿಸುತ್ತವೆ. ಇದಾದ ನಂತರದಲ್ಲಿ ಸೋನೆ ಮಳೆ ಶುರುವಾಗುತ್ತವೆ. ಕೆರೆಕಟ್ಟೆಗಳು ಭರ್ತಿಯಾಗಿರುತ್ತವೆ. ಜತೆಗೆ ಸೋನೆ ಮಳೆ ಜಿನುಗುವುದರಿಂದ ಭತ್ತದ ನಾಟಿಗೆ ಅನುಕೂಲವಾಗುತ್ತದೆ. ಈ ಸೋನೆ ಮಳೆಯಲ್ಲಿಯೇ ಭೂಮಿ ಚೆನ್ನಾಗಿ ನೀರು ಕುಡಿಯುತ್ತದೆ. ಅಂರ್ತಜಲ ಹೆಚ್ಚುತ್ತದೆ. ಆದರೆ, ಈ ಬಾರಿ ಅಡ್ಡ ಮಳೆಗಳೇ ಸರಿಯಾಗಿ ಆಗಿಲ್ಲ. ಯಾವ ಕೆರೆಕಟ್ಟೆಗಳಿಗೂ ನೀರು ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೋನೆ ಮಳೆ ಶುರುವಾಗಿದೆ. ಇದರ ನೇರ ಪರಿಣಾಮ ಭತ್ತದ ಬೆಳೆಯ ಮೇಲಾಗುತ್ತದೆ. ಏಕೆಂದರೆ ಕೆರೆಕಟ್ಟೆಗಳೇ ಭರ್ತಿಯಾಗದೆ ಸೋನೆ ಮಳೆಯ ಜಿನುಗುವ ನೀರಿಗೆ ಭತ್ತ ನಾಟಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ವರ್ಷ ಬತ್ತದ ಉತ್ಪಾದನೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಜೋಳ ಬಿತ್ತನೆ ಮೇಲೂ ಪರಿಣಾಮ:

ಕಳೆದ ಕೆಲ ವರ್ಷಗಳಿಂದ ಮೇ ಅಂತ್ಯದಲ್ಲಿ ಹಾಗೂ ಜೂನ್‌ ಆರಂಭದಲ್ಲಿ ಮುಸುಕಿನ ಜೋಳದ ಬಿತ್ತನೆ ಕಾರ್ಯ ನಡೆಯುತ್ತಿತ್ತು. ಆದರೆ, ಈ ವರ್ಷ ಮೇ ತಿಂಗಳಲ್ಲೇ ಸೋನೆಯ ವಾತಾವರಣ ನಿರ್ಮಾಣವಾಗಿರುವುದರಿಂದ ಮುಸುಕಿನ ಜೋಳದ ಬಿತ್ತನೆ ಮೇಲೆ ಪರಿಣಾಮ ಬೀರಿದೆ.

ಏಪ್ರಿಲ್‌, ಮೇ ತಿಂಗಳಲ್ಲಿ ಬೀಳುವ ಅಡ್ಡ ಮಳೆಗಳಿಗೆ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಲಾಗುವುದು. ಹೀಗೆ ಉಳುಮೆ ಮಾಡಿದ ಹೊಲಗಳ ಮಣ್ಣು ಬಿಸಿಲಿನಲ್ಲಿ ಚೆನ್ನಾಗಿ ಒಣಗಬೇಕು. ಆ ನಂತರದಲ್ಲಿ ಮತ್ತೆ ಬರುವ ಮಳೆಗೆ ಹದ ನೋಡಿಕೊಂಡು ಜೋಳ ಬಿತ್ತನೆ ಮಾಡಲಾಗುತ್ತದೆ. ಅಂತೆಯೇ ಎಷ್ಟೋ ರೈತರು ಹೊಲಗಳನ್ನೇ ಉಳುಮೆ ಮಾಡಿರಲಿಲ್ಲ. ಇದೀಗ ಸೋನೆ ಶುರುವಾಗಿರುವುದರಿಂದ ಸಾಕಷ್ಟು ರೈತರು ಜೋಳ ಬಿತ್ತನೆ ಮಾಡಲಾಗುತ್ತಿಲ್ಲ. ಈಗಾಗಲೇ ತರಾತುರಿಯಲ್ಲಿ ಬಿತ್ತೆನೆ ಮಾಡಿರುವ ಜೋಳ ಕೂಡ ಹುಲುಸಾಗಿ ಬೆಳೆಯುವುದಿಲ್ಲ. ಏಕೆಂದರೆ ಮುಸುಕಿನ ಜೋಳ ಎದೆಮಟ್ಟ ಬೆಳೆಯುವವರೆಗೂ ಮಳೆಯೂ ಬರುತ್ತಿರಬೇಕು. ಬಿಸಿಲು ಇರಬೇಕು. ಆದರೆ ಇದೀಗ ಸೋನೆ ಮಳೆಯ ಜತೆಗೆ ಶೀತ ವಾತಾವರಣ ಇರುವುದರಿಂದ ಬಿತ್ತನೆ ಮಾಡಿರುವ ಜೋಳ ಕೂಡ ಹುಲುಸಾಗಿ ಬೆಳೆಯುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮುಸುಕಿನ ಜೋಳದ ಉತ್ಪಾದನೆ ಕೂಡ ಕುಸಿಯುವ ಸಾಧ್ಯತೆ ಇದೆ.