ಕುಕನೂರು ತಾಲೂಕಲ್ಲಿ ವಾಡಿಕೆಗಿಂತ ಮಳೆ ಕಡಿಮೆ

| Published : May 25 2024, 12:53 AM IST

ಕುಕನೂರು ತಾಲೂಕಲ್ಲಿ ವಾಡಿಕೆಗಿಂತ ಮಳೆ ಕಡಿಮೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಕನೂರು ತಾಲೂಕಿನಲ್ಲಿ ಕೆಲವೆಡೆ ಮುಂಗಾರು ಪೂರ್ವ ಮಳೆ ಕೊರತೆಯಾಗಿದೆ. ಹೀಗಾಗಿ ರೈತರು ಹೆಸರು ಬಿತ್ತನೆ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಾರೆ.

ಕುಕನೂರು: ಮುಂಗಾರು ಪೂರ್ವ ಮಳೆ ತಾಲೂಕಿನಾದ್ಯಂತ ಸಂಪೂರ್ಣ ಮಳೆ ಆಗಿಲ್ಲ. ಒಂದು ಕಡೆ ಮಳೆಯಾದರೆ, ಇನ್ನೊಂದೆಡೆ ಸ್ವಲ್ಪವೇ ಮಳೆ ಆಗಿದೆ. ಇದರಿಂದ ತಾಲೂಕು ಸಂಪೂರ್ಣ ಮಳೆ ತೇವಾಂಶದಿಂದ ಕೂಡಿಲ್ಲ.

ತಾಲೂಕಿನ ತಳಕಲ್, ಭಾನಾಪುರ, ತಳಬಾಳ, ಬೆಣಕಲ್ಲ, ನಿಟ್ಟಾಲಿ, ಅರಕೇರಿ, ವೀರಾಪುರ, ಮಂಗಳೂರು ಹೋಬಳಿಯ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಐದು ದಿನದ ಹಿಂದೆ ಉತ್ತಮ ಮಳೆ ಸುರಿದಿದೆ. ಆದರೆ ಕುಕನೂರು ಹೋಬಳಿಯ ಮಸಬಹಂಚಿನಾಳ, ಕುಕನೂರು, ಗುದ್ನೇಪ್ಪನಮಠ, ರಾಜೂರು, ಆಡೂರು, ದ್ಯಾಂಪುರ, ಚನ್ನಪ್ಪನಹಳ್ಳಿ, ಹರಿಶಂಕರಬಂಡಿ ಗ್ರಾಮಗಳಲ್ಲಿ ಬಹುತೇಖವಾಗಿ ಮಳೆ ಕಡಿಮೆ ಆಗಿದೆ. ಕೆಲವು ಭಾಗಗಳಲ್ಲಿ ಈಗಾಗಲೇ ಹೆಸರು ಬೆಳೆ ಬಿತ್ತನೆ ಕಾರ್ಯ ಸಹ ಜರುಗುತ್ತಿದೆ. ಮಳೆ ಕೊರತೆ ಪ್ರದೇಶದಲ್ಲಿ ಇನ್ನೂ ಬಿತ್ತನೆ ಇಲ್ಲದೆ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಕುಕನೂರು ಹೋಬಳಿ ಹಳ್ಳಿಗಳಲ್ಲಿ ವಾಡಿಕೆಗಿಂತ ಶೇ. 1ರಷ್ಟು ಮಳೆ ಕಡಿಮೆ ಆಗಿದೆ ಎನ್ನುತ್ತಾರೆ ಹವಾಮಾನ ಇಲಾಖೆಯವರು. ಆದರೆ ಆ ಮಳೆ ಸಹ ಕೆಲವು ಗ್ರಾಮಗಳಲ್ಲಿ ಆದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಆಗಿಲ್ಲ. ಇದರಿಂದ ರೈತ ವರ್ಗ ಮಳೆ ಇಲ್ಲದ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಂಡಿಲ್ಲ.

ರೋಹಿಣಿ ಮಳೆ ಆರಂಭ: ಮೇ 24ರಿಂದ ರೋಹಿಣಿ ಮಳೆ ಆರಂಭವಾಗಿದ್ದು, ಈ ರೋಹಿಣಿ ಮಳೆಯ ಆರಂಭದ ದಿನದಿಂದ ಹೆಸರು ಬಿತ್ತನೆ ಆರಂಭವಾಗುತ್ತದೆ. ಮಳೆ ಆದ ಪ್ರದೇಶದಲ್ಲಿ ಈಗಾಗಲೇ ಹೆಸರು ಬೆಳೆ ಬಿತ್ತನೆ ಆಗುತ್ತಿದೆ. ತಾಲೂಕಿನಾದ್ಯಂತ ಹೆಸರು ಬೆಳೆ ಬಿತ್ತನೆ ಗುರಿ 2,341 ಹೆಕ್ಟೇರ್ ಇದ್ದು, ಸದ್ಯ 480 ಹೆಕ್ಟೇರ್ ಹೆಸರು ಬಿತ್ತನೆ ಆಗಿದೆ.

ಮಳೆ ಬೇಕು: ಸದ್ಯಕ್ಕಾಗಿರುವ ಮಳೆ ಕೆಲವು ಕಡೆ ಬಿತ್ತನೆಗಾಗುವಷ್ಟು ತೇವಾಂಶ ನೀಡಿದರೆ, ಇನ್ನೂ ಕೆಲವು ಕಡೆ ಅಷ್ಟೊಂದು ತೇವಾಂಶ ನೀಡಿಲ್ಲ. ಮಳೆಯಾಗದ ಕಡೆ ರೈತರು ಭೂಮಿಯನ್ನು ಉಳುಮೆ ಮಾಡಿ ಮಳೆಗಾಗಿ ಕಾಯುತ್ತಾ ಕುಳಿತಿದ್ದಾರೆ. ತಾಲೂಕಿನಲ್ಲಿ ಬಹುತೇಕ ಗ್ರಾಮದಲ್ಲಿ ಬಿತ್ತನೆ ತೇವಾಂಶಕ್ಕೆ ಅಗತ್ಯ ಮಳೆ ಅವಶ್ಯಕತೆ ಇದೆ.ಕುಕನೂರು ತಾಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಮಳೆ ಕೊರತೆ ಇದೆ. ತೇವಾಂಶ ಪೂರಿತವಾದ ಗ್ರಾಮಗಳಲ್ಲಿ ಈಗಾಗಲೇ ಹೆಸರು ಬೆಳೆ ಬಿತ್ತನೆ ಆಗುತ್ತಿದೆ. ಇನ್ನೂ ಕೆಲವು ಕಡೆ ಮಳೆ ಆಗಬೇಕು. ಬಿತ್ತನೆ ಬೀಜ ಮೊಳಕೆ ಒಡೆಯುವಷ್ಟು ತೇವಾಂಶ ಇದ್ದರೆ ರೈತರು ಬಿತ್ತನೆಗೆ ಮುಂದಾಗಬೇಕು. ಕೆಲವು ಕಡೆ ಮಳೆ ಇಲ್ಲದೆ ತೇವಾಂಶ ಕೊರತೆ ಇದೆ ಎಂದು ಕುಕನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ತೇರಿನ ಹೇಳಿದರು.