ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಸೋಮವಾರ ಬೆಳಗ್ಗಿನಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮರಗಳು ಉರುಳಿ ಹಾನಿಯಾದ ಘಟನೆಗಳು ಸಂಭವಿಸಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ.ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ನಿವಾಸಿ ದೇವಕಿ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ.ಶಂಭೂರು ಗ್ರಾಮದ ಮೋಹನದಾಸ ಎಂಬವರ ವಾಸ್ತವ್ಯಸ ಮನೆಗೆ ಮಳೆ ಗಾಳಿಯಿಂದ ಹಾನಿ ಸಂಭವಿಸಿದೆ. ಬಿಳಿಯೂರು ಗ್ರಾಮದ ಪೆಜಕೊಡ ಎಂಬಲ್ಲಿ ಸುಂದರಿ ಎಂಬವರ ಮನೆಯ ಒಂದು ಪಾರ್ಶ್ವದ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದ್ದು ತೀವ್ರ ಹಾನಿ ಸಂಭವಿಸಿದೆ, ಮನೆಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಹೆದ್ದಾರಿಯೇ ಚರಂಡಿ, ಟ್ರಾಫಿಕ್ ಜಾಂ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಎಡೆಬಿಡದೆ ಮಳೆ ಸುರಿದ ಹಿನ್ನೆಲೆಯಲ್ಲಿ ಹೆದ್ದಾರಿಯೇ ಚರಂಡಿಯಾಗಿ ಪರಿವರ್ತನೆಗೊಂಡಿದೆ. ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ಸರ್ವಿಸ್ ರಸ್ತೆಯ ಡಾಂಬರು ನೀರು ಪಾಲಾಗಿದೆ. ಸದ್ರಿ ರಸ್ತೆಯಲ್ಲಿ ಪಯಣಿಸುವುದು ಸಾಹಸದ ಕೆಲಸವಾಗಿ ಪರಿಣಮಿಸಿದೆ. ಇದರಿಂದ ಕಲ್ಲಡ್ಕ-ಮೆಲ್ಕಾರ್ ಪಾಣೆಮಂಗಳೂರಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ನಡುವೆ ಬಿ.ಸಿ.ರೋಡು ಸೇತುವೆಯಲ್ಲಿ ಕಾರೊಂದು ಕೆಟ್ಟು ನಿಂತ ಪರಿಣಾಮ ಹಲವು ತಾಸುಗಳ ಕಾಲ ಟ್ರಾಫಿಕ್ ಜಾಮ್ ಇಂಟಾಗಿತ್ತು. ಪೊಲೀಸರು ಮಳೆಯ ನಡುವೆಯೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಡುವಂತಾಯಿತು.