ಸಾರಾಂಶ
ಸವದತ್ತಿ : ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಸುರಿದ ರಭಸದ ಮಳೆಯಿಂದಾಗಿ ದೇವಸ್ಥಾನದ ಪಾವಳಿಯಲ್ಲಿ ನೀರು ಧುಮುಕಿದ್ದು, ಭಕ್ತರಿಗೆ ದೇವಿಯ ದರ್ಶನ ಪಡೆದುಕೊಳ್ಳಲು ಹೆಚ್ಚಿನ ಅಸ್ತವ್ಯಸ್ತವಾಯಿತು.
ದೇವಸ್ಥಾನದ ಎತ್ತರದ ಗುಡ್ಡದ ಪ್ರದೇಶದ ಕೊಳ್ಳಗಳಿಂದ ಹರಿದು ಬಂದ ಮಳೆಯ ನೀರು ದೇವಸ್ಥಾನದ ಸುತ್ತಲಿನ ಚರಂಡಿಗಳ ಮೂಲಕ ಸಾಗದೆ ದೇವಸ್ಥಾನದ ದ್ವಾರಗಳ ಮೂಲಕ ಪಾವಳಿಗೆ ಪ್ರವೇಶ ಮಾಡಿದೆ. ದೇವಸ್ಥಾನದ ಆವರಣದಲ್ಲಿರುವ ಚರಂಡಿಯಲ್ಲಿ ಅನೇಕ ತ್ಯಾಜ್ಯ ವಸ್ತುಗಳು ಶೇಖರಣೆಗೊಂಡಿದ್ದರಿಂದ ಚರಂಡಿಗಳು ಬ್ಲಾಕ್ ಆಗಿ ಗುಡ್ಡದ ಮೇಲ್ಭಾಗದ ನೀರು ಸರಳವಾಗಿ ಚರಂಡಿಗಳ ಮೂಲಕ ಸಾಗದೇ ದೇವಸ್ಥಾನದೊಳಗೆ ಹೋದ ಪರಿಣಾಮ ಪಾವಳಿಯೆಲ್ಲ ಕೆಸರುಮಯವಾಗಿದೆ.ಶುಕ್ರವಾರ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ದೇವಸ್ಥಾನದ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಹಾಗೂ ಸ್ವಚ್ಛತಾ ಸಿಬ್ಬಂದಿ ಬಳಸಿಕೊಂಡು ಕ್ಷೇತ್ರವನ್ನು ಸ್ವಚ್ಛಗೊಳಿಸಿದ್ದಾರೆ.
ಯಲ್ಲಮ್ಮನಗುಡ್ಡದಲ್ಲಿ ಅತಿಯಾಗಿ ಮಳೆಯಾದಗ ದೇವಸ್ಥಾನದೊಳಗೆ ನೀರು ಧುಮುಕುವುದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ. ದೇವಸ್ಥಾನದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿರುವುದರಿಂದ ದೇವಸ್ಥಾನದ ಉನ್ನತ ಅಭಿವೃದ್ಧಿಯ ಜೊತೆಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಆಡಳಿತ ಮಂಡಳಿಯ ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಬೇಕಿದೆ. ಶುಕ್ರವಾರ ಬೆಳಗ್ಗೆಯೇ ದೇವಸ್ಥಾನದ ಆವರಣವನ್ನು ಸ್ವಚ್ಚಗೊಳಿಸಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವಂತ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಕಂಡು ಬಂದಿಲ್ಲ. ಶುಕ್ರವಾರದಂದು ಭಕ್ತರು ಯಥಾಸ್ಥಿತಿಯಾಗಿ ದೇವಿಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ತುಂಬಿ ಹರಿಯತ್ತಿರುವ ದಬದಬೆ:
ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ದಬದಬೆಯು ಗುರುವಾರ ಸುರಿದ ಮಳೆಯಿಂದ ತುಂಬಿ ಹರಿಯುತ್ತಿದೆ. ಗುಡ್ಡದ ಪ್ರದೇಶದಿಂದ ಹರಿದು ಬರುತ್ತಿರುವ ಈ ಜಲಪಾತವು ಜನರನ್ನು ಆಕರ್ಷಣೆಗೊಳಿಸಿದ್ದು, ಮಾರ್ಗ ಮಧ್ಯೆ ಸಾಗುವವರು ವಾಹನಗಳನ್ನು ನಿಲ್ಲಿಸಿ ದಬದಬೆ ಜಲಪಾತವನ್ನು ವೀಕ್ಷಿಸುತ್ತ ಸೆಲ್ಫಿ ತೆಗೆದುಕೊಳ್ಳುತ್ತ ಸಾಗುತ್ತಿದ್ದಾರೆ.