ಸಾರಾಂಶ
ಬಳ್ಳಾರಿ ತಾಲೂಕಿನ ಕೊಳಗಲ್ಲು ನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 500ಕ್ಕಿಂತ ಹೆಚ್ಚಿನ ಮಕ್ಕಳು ದಾಖಲಾಗಿದೆ.
ಕಂಪ್ಲಿ: ಇಲ್ಲಿನ ಡಾ.ಅಬ್ದುಲ್ ಕಲಾಂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚರ್ಮ ಕಾಯಿಲೆ ಬಂದಿದ್ದು, ಈ ಕುರಿತು ಕ್ರಮ ಜರುಗಿಸಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಠೋಬಾ ಹೊನಕಾಂಡೆ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ಮಾತನಾಡಿ, ಬಳ್ಳಾರಿ ತಾಲೂಕಿನ ಕೊಳಗಲ್ಲು ನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 500ಕ್ಕಿಂತ ಹೆಚ್ಚಿನ ಮಕ್ಕಳು ದಾಖಲಾಗಿದ್ದು ತಮ್ಮ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ. ಶಾಲೆಯಲ್ಲಿ ಬೋರ್‌ವೆಲ್ ನೀರು ಸರಿ ಇಲ್ಲದ ಕಾರಣ ಮಕ್ಕಳಿಗೆ ಚರ್ಮ ಕಾಯಿಲೆ ಬಂದಿರುತ್ತದೆ. ಶಾಲೆಗೆ ಉತ್ತಮ ಗುಣ ಮಟ್ಟದ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಕನಿಷ್ಟ ತಿಂಗಳಿಗೊಮ್ಮೆ ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಬೇಕು ಎಂದರು.ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸಿ, ಆರೋಗ್ಯದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕೆಂದು ಹಾಗೂ ಸರ್ಕಾರವು ನಿಗದಿಪಡಿಸಿದ ಊಟ-ತಿಂಡಿಗಳನ್ನು ನೀಡುತ್ತಿಲ್ಲವೆಂದು ತಿಳಿದುಬಂದಿದೆ. ಶಾಲೆಯಲ್ಲಿ ದಾಖಲಾಗಿರುವ ಮಕ್ಕಳಿಗೆ ಇಲ್ಲಿಯವರೆಗೂ ಯಾವುದೇ ಸರ್ಕಾರದಿಂದ ನೀಡುವ ಉಚಿತ ಪಠ್ಯಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಆದಷ್ಟು ಬೇಗನೆ ಸೂಕ್ತ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿಕೊಂಡರು.