ಸಾರಾಂಶ
ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ. 99.22ರಷ್ಟು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದು, ಯೋಜನೆಯ ಲಾಭ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ತಿಳಿಸಿದರು. ಸೌಕರ್ಯ ಪಡೆಯುತ್ತಿರುವ ಜನರಲ್ಲಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿಲ್ಲ. ಆಯಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡುಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ. 99.22ರಷ್ಟು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದು, ಯೋಜನೆಯ ಲಾಭ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ತಿಳಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಐದು ಗ್ಯಾರಂಟಿ ಯೋಜನೆಗಳಿಂದ ತಾಲೂಕಿಗೆ ಸುಮಾರು 100 ಕೋಟಿ ರು. ಸಹಾಯಧನ ಎಲ್ಲಾ ಫಲಾನುಭವಿಗಳಿಗೆ ಲಭ್ಯವಾಗುತ್ತಿದೆ. ಹೀಗಿದ್ದರೂ ಕೂಡ ಸೌಕರ್ಯ ಪಡೆಯುತ್ತಿರುವ ಜನರಲ್ಲಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿಲ್ಲ. ಆಯಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಬಸ್ ಸೌಕರ್ಯ ಹೆಚ್ಚಿಸಿ:ತಾಲೂಕಿನಲ್ಲಿ ಎರಡು ಸಾರಿಗೆ ಸಂಸ್ಥೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ರಾಮನಾಥಪುರ ಘಟಕದಿಂದ ಪ್ರತಿ ತಿಂಗಳು 5 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಅಂದಾಜು 2.29 ಕೋಟಿಗೂ ಅಧಿಕ ಹಣ ಸಂಸ್ಥೆಗೆ ಸರ್ಕಾರ ನೀಡುತ್ತಿದೆ. ಇದುವರೆಗೂ 43 ಕೋಟಿ ರು. ಹಣ ಸಂದಾಯವಾಗಿದೆ. ಅದೇ ರೀತಿ ಅರಕಲಗೂಡು ಘಟಕದಿಂದ ಸಂಚರಿಸುವ ಬಸ್‌ಗಳಲ್ಲಿ 4.60 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ, 2.26ಕೋಟಿ ರು. ರೇವಿನ್ಯೂ ಆಗಿದೆ.ಈ ಎರಡು ಘಟಕಗಳಿಂದ ಒಟ್ಟು ಒಂದು ಕೋಟಿಗೂ ಹೆಚ್ಚುಮಂದಿ ಪ್ರಯಾಣ ಮಾಡಿದ್ದಾರೆ. 86 ಕೋಟಿಗೂ ಅಧಿಕ ಹಣ ಈ ಎರಡು ಡಿಪೋಗಳಿಗೆ ಸಂದಾಯವಾಗಿದೆ. ಶಕ್ತಿ ಯೋಜನೆಯಿಂದ ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಿದೆ. ಯಾವುದೇ ಲೋಪ, ದುರುಪಯೋಗ ಆಗಬಾರದು. ಪ್ರಮುಖವಾಗಿ ಈ ಯೋಜನೆಯಲ್ಲಿ ಮತ್ತಷ್ಟು ಬಸ್ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.ತಾಲೂಕಿನಲ್ಲಿ ಸೆಸ್ಕಾಂನ ಎರಡು ವಿಭಾಗಳು ಕಾರ್ಯನಿರ್ವಹಿಸುತ್ತಿವೆ. ರಾಮನಾಥಪುರ ವಿಭಾಗದಲ್ಲಿ 31 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೃಹಜ್ಯೋತಿ ಫಲಾನುಭವಿಗಳು ಇದ್ದು, ಇದುವರೆಗೂ 19 ಕೋಟಿ ರು. ಸಹಾಯಧನ ದೊರೆಕಿಸಲಾಗಿದೆ. ಅದೇ ರೀತಿ ಅರಕಲಗೂಡು ವಿಭಾಗದಲ್ಲಿ 24 ಸಾವಿರ ಮಂದಿ ಫಲಾನುಭವಿಗಳಿದ್ದು, 14 ಕೋಟಿ ರು.ಸಹಾಯಧನ ದೊರೆತಿದೆ. ಒಟ್ಟು ಎರಡು ವಿಭಾಗಗಳಿಂದ 33 ಕೋಟಿ ರು. ಸಹಾಯಧನ ತಾಲೂಕಿಗೆ ದೊರೆತಂತಾಗಿದೆ ಎಂದರು.ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯ 51 ಸಾವಿರ ಫಲಾನುಭವಿಗಳಿದ್ದು, 10ಕೋಟಿ ರು. ಪ್ರತಿ ತಿಂಗಳು ನೇರವಾಗಿ ಅವರ ಖಾತೆಗೆ ಜಮಾ ಆಗುತ್ತಿದೆ. ಕೆಲವು ತಾಂತ್ರಿಕ ಕಾರಣಗಳಿಂದ 408 ಮಂದಿಗೆ ಸೌಕರ್ಯ ಸಿಕ್ಕಿಲ್ಲ. ಈ ಪೈಕಿ ನೈಜ ಫಲಾನುಭವಿಗಳನ್ನ ಆಯ್ಕೆ ಮಾಡಿ ಅವರಿಗೂ ಸವಲತ್ತು ಸಿಗುವಂತೆ ಕಾರ್ಯನಿರ್ವಹಿಸಬೇಕೆಂದು ಸಿಡಿಪಿಒ ವೆಂಕಟೇಶ್ ಅವರಿಗೆ ತಿಳಿಸಿದರು.ತಾಲೂಕಿನಲ್ಲಿ ಒಟ್ಟು 57 ಸಾವಿರದ 269 ಮಂದಿ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಫಲಾನುಭವಿಗಳಿದ್ದಾರೆ. ಈ ಪೈಕಿ 3151 ಮಂದಿ ಅಂತ್ಯೋದಯ, 50,493 ಮಂದಿ ಬಿಪಿಎಲ್ ಮತ್ತು 3613 ಮಂದಿ ಎಪಿಎಲ್ ಕಾರ್ಡ್ದಾರರು ಇದ್ದಾರೆ. ಪ್ರತಿ ತಿಂಗಳು 18ಸಾವಿರದ 75 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಬಿಪಿಎಲ್ ಫಲಾನುಭವಿಗಳಿಗೆ ತಲಾ 10 ಕೇಜಿ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ಯಾವುದೇ ಅಕ್ಕಿ ವಿತರಣೆ ಇಲ್ಲ. ಹೊಸದಾಗಿ ಪಡಿತರ ಕಾರ್ಡ್‌ಗಾಗಿ 1875ಮಂದಿ ಅರ್ಜಿ ಸಲ್ಲಿಸಿದ್ದಾರೆ. 290 ಅನರ್ಹಗೊಂಡಿವೆ. 1337 ಮಂದಿ ಹೊಸದಾಗಿ ಅರ್ಜಿ ವಿತರಣೆ ಮಾಡಲಾಗಿದೆ. ಬಾಕಿ 246 ಇವೆ. ಸರ್ಕಾರಿ ನಿಯಮಾನುಸಾರ ಅರ್ಹ ಫಲಾನುಭವಿಗಳಿಗೆ ಕಾರ್ಡ್ ನೀಡಿ ಅನ್ನಭಾಗ್ಯ ಯೋಜನೆಯ ಸವಲತ್ತು ಪಡೆಯಲು ಆಹಾರ ಇಲಾಖೆ ಅಧಿಕಾರಿ ಗಮನಹರಿಸಬೇಕೆಂದು ಸೂಚನೆ ನೀಡಿದರು.ತಾಲೂಕಿನಲ್ಲಿ ಯುವ ನಿಧಿಯ ಪ್ರಯೋಜನ ಪಡೆದುಕೊಳ್ಳುತ್ತಿರುವರ ಸಂಖ್ಯೆ 888 ಮಂದಿ ಮಾತ್ರ, ಇದು ತೃಪ್ತಿದಾಯಕವಾಗಿಲ್ಲ. ಕೂಡಲೇ ಅರ್ಹರನ್ನು ಗುರುತಿಸಿ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿ ಕ್ರಮವಹಿಸಬೇಕೆಂದು ತಿಳಿಸಿದರು.ತಾಲೂಕಿನ ಬಹುತೇಕ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರರಿಗೆ ನಿಗದಿಯಂತೆ ಅಕ್ಕಿ ವಿತರಣೆ ಮಾಡುತ್ತಿಲ್ಲ. ಒಂದು ಕಾರ್ಡ್‌ಗೆ 1ರಿಂದ 2ಕೆಜಿ ಅಕ್ಕಿಯನ್ನು ಮಾಲೀಕರು ಹಿಡಿಯುತ್ತಿರುವ ಬಗ್ಗೆ ವ್ಯಾಪಕವಾಗಿ ದೂರು ಕೇಳಿಬರುತ್ತಿದೆ. ಹೆಬ್ಬೆಟ್ಟು ಪಡೆಯುವಾಗ ಹಣವನ್ನು ಕೇಳಿ ಪಡೆಯಲಾಗುತ್ತಿದೆ. ಕೆಲವು ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಕೂಡ ಆಗುತ್ತಿದೆ. ಕಂಪ್ಯೂಟರ್ ಸ್ಕೇಲ್ ಬಳಕೆ ಮಾಡುವಂತೆ ಮನವಿ ಮಾಡಿದರೂ ಕೂಡ ಹಲವು ಅಂಗಡಿಗಳಲ್ಲಿ ಇಂದಿಗೂ ಕೂಡ ಹಳೆಯ ತೂಕದ ಬೊಟ್ಟುಗಳನ್ನು ಬಳಕೆ ಮಾಡಲಾಗುತ್ತಿದೆ. ಆಹಾರ ಸಂಗ್ರಹಣೆಗಾರರಿಂದ ಅಕ್ಕಿ ಲೋಡ್ ಹೋಗುವಾಗಲೇ ಲೋಪವಾಗುತ್ತಿದೆ ಎಂಬ ದೂರು ಕೂಡ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಸೌಮ್ಯ ಅವರಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್, ಯಾವ ನ್ಯಾಯಬೆಲೆ ಅಂಗಡಿಗಳಿಂದ ಸಮಸ್ಯೆ ಆಗುತ್ತಿದೆ ಎಂದು ದೂರು ನೀಡಿದರೇ ಅಂತಹ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮಕ್ಕಾಗಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.ಸಭೆಯಲ್ಲಿ ತಹಸೀಲ್ದಾರ್ ಸೌಮ್ಯ, ತಾಲೂಕು ಪಂಚಾಯತ್ ಇಒ ಪ್ರಕಾಶ್ ಇದ್ದರು.