ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಹಣವಿಲ್ಲದೆ ಹುಲ್ಲು, ಇಟ್ಟಿಗೆ, ಹಳೆಬಟ್ಟೆ, ಬೂದಿ ಹಾಗೂ ಇನ್ನಿತರ ಅನೈರ್ಮಲ್ಯ ವಸ್ತುಗಳನ್ನು ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಬಳಸುತ್ತಿದ್ದಾರೆ. ಇದರಿಂದ ಕ್ಯಾನ್ಸರ್, ಗರ್ಭಕೋಶದ ಸಮಸ್ಯೆಯುಂಟಾಗಿ ಬದುಕನ್ನು ನಾಶಮಾಡಿಕೊಳ್ಳುತ್ತಿದ್ದಾರೆ ಎಂದು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಆತಂಕ ವ್ಯಕ್ತಪಡಿಸಿದರು.ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಸಾವಿತ್ರಿಬಾಯಿ ಫುಲೆ ಹಾಗೂ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಋತುಚಕ್ರದ ಕುರಿತು ಗ್ರಾಮೀಣ ಭಾಗದ ಹೆಣ್ಣುಮಕ್ಕಳಲ್ಲಿ ಅರಿವಿನ ಕೊರತೆಯಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟರಿ ಪ್ಯಾಡ್ ದೊರಕುವಂತಾಗಬೇಕು. ಮುಟ್ಟಿನ ಕುರಿತು ಅರಿವು ಮೂಡಿಸುವ ಕಾರ್ಯಕೈಗೊಳ್ಳಬೇಕು. ಜಿಡಿಪಿಯ ಶೇ.50 ಪಾಲನ್ನು ಹೊಂದಿರುವ ಸಂಸಾರ ನಿಭಾಯಿಸುವ ಗೃಹಿಣಿಯರಿಗೆ ಸೂಕ್ತ ಸಂಭಾವನೆ ಕೊಡುವ ಮನಸ್ಥಿತಿಯ ಸಮಾಜ ನಿರ್ಮಾಣವಾಗಬೇಕು. ಇದರಿಂದ ಮಹಿಳಾ ಸಬಲೀಕರಣವಾಗಲಿದೆ ಎಂದರು.ಮಿತಿಮೀರಿದ ಸ್ತ್ರೀವಾದದಿಂದ ಅದರ ಸಾಧಕ-ಬಾಧಕಗಳ ಕುರಿತು ಚಿಂತನೆ ನಡೆಸುವ ಕಾಲದಲ್ಲಿದ್ದೇವೆ. ಸಾವಿತ್ರಿಬಾಯಿ ಫುಲೆ ಅವರ ಧೈರ್ಯ ಹಾಗೂ ಕುವೆಂಪು ಅವರ ಸಮಾನತೆ ಸಾರುವ ಅದಮ್ಯ ಚಿಂತನಾ ಮನೋಭಾವದ ಸ್ತ್ರೀವಾದದಿಂದ ಮುನ್ನಡೆಯೋಣ ಎಂದು ಹೇಳಿದರು.
ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ. ಸಾವಿತ್ರಿಬಾಯಿ ಫುಲೆ ವಿಚಾರಧಾರೆಗಳು ಕುರಿತು ಮಾತನಾಡಿ, 13ನೆಯ ಶತಮಾನದ ಮನುಸ್ಮೃತಿ ಸಂವಿಧಾನದ ಪ್ರಕಾರ ಶೂದ್ರರು, ಅತಿಶೂದ್ರರು ಹಾಗೂ ಎಲ್ಲ ಸಮುದಾಯದ ಹೆಣ್ಣುಮಕ್ಕಳು ಅಕ್ಷರ ಕಲಿಯುವುದು ಅಪರಾಧವಾಗಿತ್ತು. ದಲಿತರ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಮನ್ವಂತರ ಸೃಷ್ಟಿಸಿದರು ಎಂದು ತಿಳಿಸಿದರು.ಹಿರಿಯ ಪ್ರಾಧ್ಯಾಪಕ ಪ್ರೊ. ಪರಶುರಾಮ ಕೆ. ಜಿ. ಕುವೆಂಪು ವಿಚಾರಧಾರೆಗಳುಕುರಿತು ಮಾತನಾಡಿ, ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತಿದ್ದರೂ ಅಪರಾಧಗಳ ಸಂಖ್ಯೆ ಕ್ಷೀಣಿಸುತ್ತಿಲ್ಲ. ಮಾನವೀಯತೆಗೆ ಬೆಲೆಯಿಲ್ಲ. ವಿಶ್ವಮಾನವನಾಗಲು ಅವಕಾಶವೇ ಇಲ್ಲದಷ್ಟು ಕ್ರೌರ್ಯ ಮನೆಮಾಡಿದೆ. ಮೂಢನಂಬಿಕೆಗಳಿಂದ ವಿಮರ್ಶಾತ್ಮಕ ಚಿಂತನೆ-ವಿಚಾರಣೆ ಮಾಯವಾಗಿದೆ. ವೈಚಾರಿಕ ಮನೋಭಾವ ಇಲ್ಲವಾಗಿದೆ. ವೈಯಕ್ತಿಕ ಘನತೆ, ಸಾರ್ವತ್ರಿಕ ಭ್ರಾತೃತ್ವ, ಸ್ವೀಕಾರದ ತತ್ವಗಳು ಕಾಣೆಯಾಗಿವೆ ಎಂದು ತಿಳಿಸಿದರು.
ಹಿರಿಯ ಲೇಖಕಿ ಬಾ. ಹ. ರಮಾಕುಮಾರಿ ಹಾಗೂ ಕುಲಸಚಿವೆ ನಾಹಿದಾ ಜಮ್ ಜಮ್ ಅವರಿಗೆ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಗಿರಿಜಾ ಕೆ. ಎಸ್. ಉಪಸ್ಥಿತರಿದ್ದರು.