ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ಕಾರಣ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕನೊಬ್ಬನ ತಲೆ ಮೇಲೆ ಕಲ್ಲು ಎತ್ತಿ ದುಷ್ಕರ್ಮಿಗಳು ಹತ್ಯೆಗೈದಿ ಪರಾರಿಯಾಗಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಅಗ್ರೊಜಿತ್ ಮಲ್ಲಿಕ್ (18) ಕೊಲೆಯಾದ ದುರ್ದೈವಿ. ಈ ಹತ್ಯೆ ಎಸಗಿ ತಪ್ಪಿಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಳ್ಳಂದೂರು ಕೆರೆ ಸಮೀಪ ಅಪರಿಚಿತ ಮೃತದೇಹ ನೋಡಿ ಪೊಲೀಸರಿಗೆ ಶುಕ್ರವಾರ ಬೆಳಗ್ಗೆ ಸಾರ್ವಜನಿಕರು ಕರೆ ಮಾಡಿದ್ದಾರೆ. ಆಗ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹ ಪರಿಶೀಲಿಸಿದಾಗ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಮೃತ ಮಲ್ಲಿಕ್, ಬೆಳ್ಳಂದೂರು ಹತ್ತಿರ ಶೆಡ್‌ನಲ್ಲಿ ನೆಲೆಸಿದ್ದ. ನಿರ್ಮಾಣ ಹಂತದ ಕಟ್ಟಡದಲ್ಲಿ ಆತ ದುಡಿದು ಜೀವನ ಸಾಗಿಸುತ್ತಿದ್ದ. ಬೆಳ್ಳಂದೂರು ಕೆರೆ ಬಳಿ ಆತನ ತಲೆ ಮೇಲೆ ಗುರುವಾರ ರಾತ್ರಿ ಪರಿಚಿತರೇ ಕಲ್ಲು ಎತ್ತಿ ಹಾಕಿ ಕೊಂದು ಪರಾರಿಯಾಗಿದ್ದಾರೆ. ಆದರೆ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.