ಸಾರಾಂಶ
ರೋಣ: ಬಿಜೆಪಿಯ ಮತಗಳ್ಳತನ ವಿರುದ್ಧ ಯುವಶಕ್ತಿ ಒಗ್ಗಟ್ಟಾಗಿ ಗಟ್ಟಿ ಧ್ವನಿ ಎತ್ತಿ ಹೋರಾಡುವ ಮೂಲಕ ರಾಹುಲ್‌ಗಾಂಧಿ ಅವರಿಗೆ ಬಲಿಷ್ಠ ಶಕ್ತಿಯಾಗಿ ನಿಲ್ಲಬೇಕಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ತಿಳಿಸಿದರು.
ಬುಧವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ರೋಣ ವಿಧಾನಸಭಾ ಮತಕ್ಷೇತ್ರ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು.ಯುವ ಸಂಘಟನೆ ಏನೆಂಬುದು ಈಗಾಗಲೇ ದೇಶಕ್ಕೆ ಗೊತ್ತಿದೆ. ಯುವಕರು ತಮ್ಮಶಕ್ತಿ, ಸಾಮರ್ಥ್ಯ ಸಾಬೀತುಪಡಿಸಲು ದೇಶ ಸೇವೆ ಸಲ್ಲಿಸುವುದು ಮುಖ್ಯವಾಗಿದೆ. ಕಾಂಗ್ರೆಸ್ ಯುವಕರಿಗೆ ಸಾಕಷ್ಟು ಅವಕಾಶ, ಆದ್ಯತೆ ನೀಡಿದೆ. ಮತಗಳ್ಳತನ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಯುವಶಕ್ತಿ ಬಲ ತುಂಬುವಲ್ಲಿ, ರಾಹುಲ್‌ಗಾಂಧಿ ಅವರ ಕೈಬಲಪಡಿಸಲು ಯುವಶಕ್ತಿ ಒಗ್ಗಟ್ಟಿನ ಹೋರಾಟ ಅವಶ್ಯವಿದೆ. ಕಳೆದ ಹತ್ತು ವರ್ಷದಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕೇಂದ್ರ ಸರ್ಕಾರ ಭರವಸೆಯಲ್ಲಿಯೇ ಜನರನ್ನು ವಂಚಿಸುತ್ತಿದೆ. ಇದನ್ನು ಯುವಕರು ಅರಿಯಬೇಕು. ಬಿಜೆಪಿ ದೇಶದ ಜನತೆಯನ್ನು ದಾರಿ ತಪ್ಪಿಸುವುದನ್ನು ಅರಿಯಬೇಕು. ಇದಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಅಹಿಂದ ವರ್ಗದ ಮತಗಳನ್ನು ಕಳ್ಳತನ ಮಾಡುವುದೇ ಬಿಜೆಪಿ ಟಾರ್ಗೆಟ್ ಆಗಿದೆ. ಮತಗಳ್ಳತನ ಮಾಡುವಲ್ಲಿ ಮನುವಾದಿಗಳು, ಆರ್‌ಎಸ್‌ಎಸ್‌ನವರು ಮಹಾ ನಿಪುಣರಾಗಿದ್ದಾರೆ. ವೋಟ್ ಚೋರಿಯ ಬಗ್ಗೆ ಯುವಕರು ತಿಳಿದುಕೊಳ್ಳಬೇಕು. ದೇಶದಲ್ಲಿ ಬಿಜೆಪಿ ಅಧಿಕಾರ ಬಂದಾಗಿನಿಂದ ಜನತೆಯನ್ನು ವಂಚಿಸುತ್ತಿದೆ. ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದವರನ್ನು ಸಮರ್ಥಿಸಿಕೊಳ್ಳುವ ಭಾಸ್ಕರರಾವ್ ಅವರಂತ ಮನುವಾದಿಯಾಗಿದ್ದಾರೆ ಎಂದರು.ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಯುವಕರು ವ್ಯಕ್ತಿತ್ವವನ್ನು, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪಕ್ಷನಿಷ್ಠೆ ಇದ್ದಲ್ಲಿ ಅವಕಾಶ, ಉನ್ನತ ಸ್ಥಾನಗಳು ಹುಡುಕಿಕೊಂಡು ಬರುತ್ತವೆ. ಪ್ರಧಾನಮಂತ್ರಿಯವರು ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಯುವಕರಿಗೆ ಉದ್ಯೋಗ ಭರವಸೆ ನೀಡಿದ್ದು, ಈ ಮಾತು ಈಡೇರಿಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂದರು.
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತಮಾಡಿ, ಮತಗಳ್ಳತನ ಬಗ್ಗೆ ರಾಹುಲ್‌ಗಾಂಧಿಯವರ ಹೋರಾಟ ಯುವಕರಿಗೆ ಸ್ಫೂರ್ತಿ ತಂದಿದ್ದು, ಮತಗಳ್ಳತನದ ವಿರುದ್ಧ ಯುವಕರು ಹೋರಾಡುವುದು ಅಗತ್ಯವಿದೆ ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ, ರಾಷ್ಟ್ರೀಯ ಸಚೇತಕ ವಿವೇಕ ಯಾವಗಲ್ಲ ಮಾತನಾಡಿದರು. ಸಮಾವೇಶದಲ್ಲಿ ದೀಪಿಕಾ ರೆಡ್ಡಿ, ಅಬ್ದುಲ್ ದೇಸಾಯಿ, ಅರ್ಜುನ ಪಾಟೀಲ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಸ್. ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಅಶೋಕ ಮಂದಾಲಿ, ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೀರಣ್ಣ ಶೆಟ್ಟರ್, ಕೀರ್ತಿರಾಜ, ಉದಯ, ನಾಗರಾಜ, ಅಶೋಕ, ರವಿಕುಮಾರ, ವಿ.ಆರ್. ಗುಡಿಸಾಗರ, ಉದಯಗೌಡ, ಮುತ್ತು ನವಲಗುಂದ, ಮಹೇಶ ಕಳಸಣ್ಣವರ, ಗೋಪಿ ರಾಯನಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ಹೊಸಳ್ಳಿ ನಿರೂಪಿಸಿ, ವಂದಿಸಿದರು.