ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಸದನದಲ್ಲಿ ದನಿಯೆತ್ತಿ

| Published : Jan 16 2024, 01:46 AM IST

ಸಾರಾಂಶ

ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಏಳನೇ ವೇತನ ಆಯೋಗ ವರದಿ ಕೂಡಲೇ ಅಂಗೀಕರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಶಿಕಾರಿಪುರದಲ್ಲಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಎಚ್.ಡಿ.ಮಧುಕೇಶವ ನೇತೃತ್ವದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಶಿಕಾರಿಪುರ: ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು, ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಏಳನೇ ವೇತನ ಆಯೋಗ ವರದಿ ಕೂಡಲೇ ಅಂಗೀಕರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಎಚ್.ಡಿ.ಮಧುಕೇಶವ ಮಾತನಾಡಿ, ಏಳನೇ ವೇತನ ಆಯೋಗದ ಅವಧಿ ಎರಡು ಬಾರಿ ಮುಂದೂಡಲಾಗಿದೆ. ವರದಿ ಸಲ್ಲಿಕೆ ಆಗುವ ಕುರಿತು ನೌಕರರಲ್ಲಿ ಆತಂಕ ಮೂಡಿಸಿದೆ. ಎನ್‌ಪಿಎಸ್ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಅದನ್ನು ಇನ್ನೂ ಜಾರಿಗೊಳಿಸಿಲ್ಲ ಎಂದರು.

ಈ ಕಾರಣಕ್ಕೆ 3 ಲಕ್ಷ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಮೂಲಕ ನೌಕರರಿಗೆ ನಗದುರಹಿತ ಚಿಕಿತ್ಸೆ ಈವರೆಗೂ ಸಾಧ್ಯವಾಗಿಲ್ಲ. ಈ ಕುರಿತು ಸದನದಲ್ಲಿ ನೌಕರರ ಪರವಾಗಿ ಧ್ವನಿ ಎತ್ತಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಶಾಸಕ ಬಿ.ವೈ. ವಿಜಯೇಂದ್ರ ಮನವಿ ಸ್ವೀಕರಿಸಿ ಮಾತನಾಡಿ, ನೌಕರರ ಬೇಡಿಕೆ ಈಡೇರಿಸುವುದಕ್ಕಾಗಿ ಸದನದಲ್ಲಿ ಧ್ವನಿ ಎತ್ತಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಈ ಸಂದರ್ಭ ಕಾರ್ಯದರ್ಶಿ ಬಸವನಗೌಡ ಕೊಣ್ತಿ, ಎಂ.ರಾಮಚಂದ್ರ, ಪಿ.ರೇಣುಕಪ್ಪ, ಕೆ.ಅರುಣಕುಮಾರ್, ಜಿ.ಕೆ.ಸತೀಶ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

- - - -15ಕೆ.ಎಸ್.ಕೆ.ಪಿ3:

ಶಿಕಾರಿಪುರದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ವತಿಯಿಂದ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಡ ಹೇರುವಂತೆ ಒತ್ತಾಯಿಸಿ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.