ಸಾರಾಂಶ
ಕನಕಪುರ: ರೈತರ ಹೋರಾಟಕ್ಕೆ ಸರ್ಕಾರವನ್ನೇ ಬದಲಿಸುವ ಶಕ್ತಿ ಇದೆ ಎಂದು ತೋರಿಸಿಕೊಟ್ಟ ರೈತ ಚೇತನ ಎಂ.ಡಿ.ಸುಂದರೇಶ್ ಅವರ ಹೋರಾಟ ಎಲ್ಲರಿಗೂ ಸ್ಫೂರ್ತಿ ಎಂದು ರಾಜ್ಯ ರೈತ ಸಂಘದ ಜಿ.ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ರೈತ ಸಂಘದ ಹೋರಾಟಗಾರ ಎಂ.ಡಿ.ಸುಂದರೇಶ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂ.ಡಿ.ಸುಂದರೇಶ್ ಅವರು ರೈತ ಸಂಘದ ರಚನೆಗೆ ಮೊದಲ ಕಾರ್ಯಕರ್ತರಾಗಿದ್ದರು.ನವಲಗುಂದ, ನರಗುಂದದಲ್ಲಿ ರೈತರ ಬಂಡಾಯ ಹಾಗೂ ಗೋಲಿಬಾರ್ ಸಂದರ್ಭದಲ್ಲಿ ಸಂಘಟಿತವಲ್ಲದ ರೈತ ಕುಲಗಳನ್ನು ಸಂಘಟಿಸಿದ ರೈತ ಹೋರಾಟಗಳಲ್ಲಿ ತೊಡಗಿಸಿದವರು. ಗುಂಡಿಟ್ಟ ಗುಂಡೂರಾವ್‌ಗೆ ನಮ್ಮ ಮತ ಇಲ್ಲ ಎನ್ನುವ ಮೂಲಕ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವನ್ನು ಕರ್ನಾಟಕದಲ್ಲಿ ತರಲು ಕಾರಣರಾದರು. ರೈತ ನಾಯಕ ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರನ್ನು ದೇಹ ಎಂದು ಕರೆದರೆ ಎಂ.ಡಿ.ಸುಂದರೇಶ್ ಅವರನ್ನು ಹೃದಯ ಎಂದು ಕರೆಯುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹಸಿರು ನಕ್ಷತ್ರ ವಾದ ಈ ದಿನವನ್ನು ರೈತರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಹೋರಾಟ ರೂಪಿಸುವ ದಿನವಾಗಿ ಆಚರಿಸುತ್ತಿದ್ದೇವೆ ಎಂದರು.
ಪ್ರಸ್ತುತ ಕರ್ನಾಟಕ ಸರ್ಕಾರ ರೈತ ವಿರೋಧಿ 3 ಕಾಯ್ದೆಗಳನ್ನು ಚುನಾವಣೆಗೂ ಮುನ್ನ ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿ ಈಗ ಅದರ ಬಗ್ಗೆ ಮಾತೇ ಆಡುತ್ತಿಲ್ಲ. ಕೇಂದ್ರ ಸರ್ಕಾರ ರೈತ ವಿರೋಧಿ 3 ಕಾಯ್ದೆಗಳನ್ನು ವರ್ಷಾನುಗಟ್ಟಲೆ ದೆಹಲಿಯಲ್ಲಿ ರೈತರ ಹೋರಾಟದಿಂದ ಎಚ್ಚೆತ್ತುಕೊಂಡು ವಾಪಸ್ ತೆಗೆದುಕೊಂಡಿದೆ. ಆದರೆ ವಿರೋಧ ಪಕ್ಷದಲ್ಲಿ ಇದ್ದುಕೊಂಡು ನಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿ ನಮ್ಮ ಸರ್ಕಾರ ಬಂದರೆ ರೈತ ವಿರೋಧಿ 3 ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿ ರೈತರ ಹಿತಕಾಯಲು ನಾವು ಬದ್ಧರಾಗಿರುತ್ತೇವೆ ಎಂದು ಮಾತು ಕೊಟ್ಟಿದ್ದ ರಾಜ್ಯ ಸರ್ಕಾರ ಇಂದು ಮಾತಿಗೆ ತಪ್ಪಿದೆ. ಕೂಡಲೇ ರೈತ ವಿರೋಧಿ 3 ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳದೆ ಹೋದರೆ ಹೋರಾಟಕ್ಕೆ ನಾವು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ರೈತರೇ ಸ್ವಂತ ಹಣದಲ್ಲಿ ಕಂಬ, ತಂತಿ, ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಜಿಲ್ಲೆಯಲ್ಲಿ ಆನೆ ದಾಳಿಯಿಂದ ರೈತರು ಮತ್ತು ರೈತನ ಬೆಳೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದ್ದು, ಸರ್ಕಾರ ಕಾಡು ಪ್ರಾಣಿಗಳಿಂದ ನಾಶವಾದ ರೈತರ ಬೆಳೆಗೆ ಸೂಕ್ತ ಪರಿಹಾರ ಕೊಡಬೇಕು. ಆನೆ ದಾಳಿಯಿಂದ ಪ್ರಾಣ ಹಾನಿ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡು ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ರೈತರು ತಮ್ಮ ಹಕ್ಕಿಗಾಗಿ ತಾವೇ ಸಂಘಟನೆ ಮಾಡಿ ಹೋರಾಡಬೇಕು. ಆಳುವ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ಈ ತಾರತಮ್ಯ ಮಾಡುತ್ತಿರುವ ಸರ್ಕಾರಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತರು ರೈತ ಸಂಘಟನೆಯಿಂದ ವಿಚಾರವಂತರಾಗಿ ಹೋರಾಟಕ್ಕೆ ಇಳಿಯಬೇಕು. ಸುಂದರೇಶ್ ಅವರ ಆಶಯಗಳು ಈಡೇರಬೇಕಾದರೆ ರೈತರೂ ಕೂಡ ಸಮಾಜದಲ್ಲಿ ಸ್ಥಾನಮಾನಗಳನ್ನು ಗಳಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಾರತೀಯ ನಾಗರಿಕ ಸಮಾನತೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆಬ್ಬಳ್ಳಿ ಶಿವರಾಜು, ಕಾರ್ಯದರ್ಶಿ ಕೋಡಿಹಳ್ಳಿ ಶಿವರಾಜು, ಮಹಿಳಾ ಘಟಕದ ಗೌರಮ್ಮ, ಸುಂದರಮ್ಮ, ಜೈರಾಮ್, ಮುಜಾತ ಪಾಷಾ, ಮಲ್ಲಿಕಾ, ಮಹಾದೇವ, ರವಿ, ಅರುಣ ಸೇರಿ ರೈತ ಮುಖಂಡರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದ ರೈತ ಸಂಘದ ಕಚೇರಿಯಲ್ಲಿ ಎಂ.ಡಿ.ಸುಂದರೇಶ್ ಅವರ ಸ್ಮರಾಣರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ಮುಖಂಡರು ಹಾಗೂ ಭಾರತೀಯ ಸಮಾನತಾ ಹೋರಾಟ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.