ಚಾಮರಾಜನಗರದಲ್ಲಿ ರೈತರ ಬೃಹತ್ ಪ್ರತಿಭಟನೆ: ಜ್ವಲಂತ ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರಕ್ಕೆ ಮನವಿ

| Published : Sep 19 2024, 02:03 AM IST / Updated: Sep 19 2024, 07:18 AM IST

ಸಾರಾಂಶ

ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಚಾಮರಾಜನಗರದಲ್ಲಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.  

 ಚಾಮರಾಜನಗರ : ಸರ್ಕಾರ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಡಳಿತ ಭವನದವರೆಗೆ ನಡೆಸಿದರು, ಮೆರವಣಿಗೆಯುದ್ದಕ್ಕೂ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಘೋಷಣೆಗಳನ್ನು ಕೂಗಿದರು. ಜಿಲ್ಲಾಡಳಿತ ಭವನದ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಕೃಷಿಯ ಮೇಲಿನ ಕಾರ್ಪೋರೇಟ್ ಆಕ್ರಮಣ ನಿಲ್ಲಬೇಕು, ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿಯಾಗಬೇಕು ಎಂದು ಆಗ್ರಹಿಸಿದರು.

ರೈತರ ಮತ್ತು ಜನಸಾಮಾನ್ಯರ ಬದುಕಿಗೆ ಕಂಟಕವಾಗಿರುವ ವಿದ್ಯುತ್ ಖಾಸಗೀಕರಣ ರದ್ದಾಗಬೇಕು, ಕಂಪೆನಿಗಳ ಹಿತ ಕಾಯಲು ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕೋಡ್‌ಗಳು ರದ್ದಾಗಿ ಉದ್ಯೋಗ ಭದ್ರತೆ ದೇಶದ ನೀತಿಯಾಗಬೇಕು ಎಂದರು. ಹಿತ್ತಲ ಬಾಗಿಲಿನಿಂದ ನುಗ್ಗಿ ಮೀಸಲಾತಿ ಸರ್ವನಾಶಗೊಳಿಸುತ್ತಿರುವ ಕಾರ್ಪೋರೇಟ್ ಪರ ಖಾಸಗೀಕರಣಕ್ಕೆ ಧಿಕ್ಕಾರವಿದ್ದು, ಖಾಸಗೀ ಕ್ಷೇತ್ರದಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಲಾಭದ ದುರಾಸೆಗಾಗಿ ಮಹಿಳೆಯರನ್ನು ಭೋಗದ ವಸ್ತುವಿನಂತೆ ಬಿಂಬಿಸಿ ಅತ್ಯಾಚಾರಗಳ ಸರಮಾಲೆಗೆ ಕಾರಣವಾಗಿರುವ ಕಾರ್ಪೋರೇಟ್ ಸಂಸ್ಕೃತಿ ನಾಶವಾಗಬೇಕು, ವಯನಾಡು ಭೂ ಕುಸಿತ, ಅತಿವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳಿಗೆ ದೇಶವನ್ನು ತಳ್ಳುತ್ತಿರುವ ಕಾರ್ಪೋರೇಟ್ ಮಾದರಿ ಅಭಿವೃದ್ಧಿ ಕೊನೆಗೊಳ್ಳಬೇಕು ಎಂದರು.ಹೈಕೋರ್ಟಿನ ಆದೇಶದಂತೆ ಆಯಾ ಗ್ರಾಮಗಳ ಜಾನುವಾರುಗಳಿಗೆ ಅನುಗುಣವಾಗಿ ಗೋಮಾಳ ಮತ್ತು ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸಬೇಕು, ಕರ್ನಾಟಕ ರಾಜ್ಯವನ್ನು ಕುಲಾಂತರಿ ಮುಕ್ತ ರಾಜ್ಯವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಕುಮಾರ್, ಸಂಘಟನಾ ಕಾಯದರ್ಶಿ ವಿಜಯಕುಮಾರ್, ಶಿವಮಲ್ಲಪ್ಪ, ರುದ್ರೇಶ್, ಪಿ. ಮಹೇಶ್, ಮಲ್ಲೇಶ್, ಮಾದಪ್ಪ, ಸತೀಶ್, ಶಿವರುದ್ರಪ್ಪ, ಸಿದ್ದರಾಜು, ಕಪ್ಪಶೆಟ್ಟರು, ಸುರೇಶ್‌ನಾಯ್ಕ, ಸಿದ್ದೇಶ್ ಇತರರು ಭಾಗವಹಿಸಿದ್ದರು.