ಗ್ರಾಮೀಣ ಸಾರಿಗೆ ಡಿಪೋ ಆರಂಭಿಸಲು ರೈತ ಸಂಘ ಒತ್ತಾಯ

| Published : Jun 23 2024, 02:03 AM IST

ಸಾರಾಂಶ

ಹಿರಿಯೂರು ಗ್ರಾಮೀಣ ಸಾರಿಗೆ ಡಿಪೋ ಆರಂಭಿಸಿ ಎಂದು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಗ್ರಾಮೀಣ ಭಾಗಗಳಿಗೆ ವ್ಯವಸ್ಥಿತ ಬಸ್‌ ಸೌಲಭ್ಯ ಕಲ್ಪಿಸಲು ಗ್ರಾಮೀಣ ಸಾರಿಗೆ ಡಿಪೋ ಪ್ರಾರಂಭಿಸಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆಎಸ್‌ಆರ್‌ಟಿಸಿ ಹಿರಿಯೂರು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಗ್ರಾಮೀಣ ಸಾರಿಗೆ ಡಿಪೋ ಇಲ್ಲದ ಕಾರಣ ಹಳ್ಳಿಗಳಿಂದ ನಗರಕ್ಕೆ ಪ್ರತಿನಿತ್ಯ ಬರುವ ವಿದ್ಯಾರ್ಥಿಗಳಿಗೆ, ನೌಕರರಿಗೆ, ಕಾರ್ಮಿಕರಿಗೆ, ರೈತರಿಗೆ ತುಂಬಾ ತೊಂದರೆಯಾಗಿದೆ. ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರದೇ ಪರದಾಡುವಂತಾಗಿದೆ. ಜಿಲ್ಲೆಯ ಉಳಿದೆಲ್ಲಾ ತಾಲೂಕುಗಳಲ್ಲಿ ಈಗಾಗಲೇ ಗ್ರಾಮೀಣ ಸಾರಿಗೆ ಡಿಪೋಗಳಿದ್ದು ಆ ತಾಲೂಕುಗಳ ಹಳ್ಳಿಗಳಿಗೆ ಬಸ್ಸಿನ ಸೌಲಭ್ಯ ಸಿಕ್ಕಿದೆ. ಆದರೆ ನಮ್ಮ ತಾಲೂಕಿನಲ್ಲಿ ಡಿಪೋ ಬೇಕೆಂದು ನಡೆಸಿದ ಧರಣಿ ನಂತರ ಡಿಪೋ ಮಂಜೂರಾತಿ ಆಯಿತು. ಆದರೆ ಮೂರು ವರ್ಷ ಕಳೆದರೂ ಇನ್ನೂ ನಿಧಾನಗತಿ ಕಾಮಗಾರಿ ನಡೆಯುತ್ತಲೇ ಇದೆ. ಡಿಪೋ ಪ್ರಾರಂಭಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದು ವಾರದಲ್ಲಿ ಡಿಪೋ ಪ್ರಾರಂಭಿಸದಿದ್ದರೆ ಬಸ್ ನಿಲ್ದಾಣದ ಮುಂಭಾಗ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಸಿದ್ದರಾಮಣ್ಣ, ತಿಮ್ಮಾರೆಡ್ಡಿ, ಶಿವಣ್ಣ, ಜಯಣ್ಣ, ಕೆಂಚಪ್ಪ, ಜಗದೀಶ್, ರಾಜಣ್ಣ, ಸಿದ್ದಪ್ಪ, ಮೀಸೆ ರಾಮಣ್ಣ, ನಾರಾಯಣಪ್ಪ, ಜಗನ್ನಾಥ್, ಗಿರೀಶ್, ರಘುನಾಥ್ ಗೌಡ, ಬಾಲಕೃಷ್ಣ, ರಾಮಕೃಷ್ಣ, ನಾಗರಾಜಪ್ಪ ಇತರರು ಹಾಜರಿದ್ದರು.