ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಆರೋದಡಿ ಬಂಧಿತರಾಗಿರುವ ಶಾಸಕ ಮುನಿರತ್ನ ಅವರ ಶಾಸಕತ್ವ ರದ್ದುಗೊಳಿಸುವಂತೆ ಆಗ್ರಹಿಸಿ ರೈತಸಂಘ ಮತ್ತು ದಲಿತಪರ ಸಂಘಟನೆ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ ರೈತಸಂಘ ಮತ್ತು ದಲಿತ ಸಂಘಟನೆ ಒಕ್ಕೂಟ ಮತ್ತು ಪ್ರಗತಿಪರ ಒಕ್ಕೂಟ ಸಂಘಟನೆಯ ಕಾರ್ಯಕರ್ತರು ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿದರು.
ಸಾಂವಿಧಾನಿಕ ಹುದ್ದೆ ಆಲಂಕರಿಸಿರುವ ಶಾಸಕರು ಜಾತಿ ನಿಂದನೆ ಜತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಕೇವಲ ಕಮೀಷನ್ ಆಸೆಗಾಗಿ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮತ್ತು ಆತನ ಬೆಂಬಲಕ್ಕೆ ನಿಂತಿದ್ದ ವ್ಯಕ್ತಿ ವಿರುದ್ಧ ಅಸಹನೀಯ ಮಾತುಗಳಾನ್ನಾಡುವ ಮೂಲಕ ಶಾಸಕ ಸ್ಥಾನಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂತ್ರಸ್ತರ ದೂರಿನ ಮೇರೆಗೆ ಮುನಿರತ್ನ ಅವರ ಬಂಧನವಾಗಿದೆ. ಆದರೆ, ಇಂತಹ ದುರ್ನಡತೆ ಹೊಂದಿರುವ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎಸ್.ಸಂತೋಷ್ ಅವರ ಮೂಲಕ ವಿಧಾನಸಭಾ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಸಚಿವರಾಗಿ, ಎರಡ್ಮೂರು ಬಾರಿ ಶಾಸಕರಿಗೆ ಅನುಭವ ಹೊಂದಿರುವ ಶಾಸಕ ಮುನಿರತ್ನ ಅವರು ಅಧಿಕಾರ ಮತ್ತು ಹಣದ ಮದದಿಂದ ಬಾಯಿಗೆ ಮಾತನಾಡಿದ್ದಾರೆ. ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯದ ಬಗ್ಗೆ ಮಾತನಾಡುವುದು ಅಕ್ಷಮ್ಯ ಅಪರಾಧ ಎಂದರು.ರಾಜ್ಯದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ. ಅದರ ಬಗ್ಗೆ ಚಕಾರ ಎತ್ತದ ಶಾಸಕರು ಲಂಚದ ಹಣಕ್ಕಾಗಿ ಜಾತಿಗಳ ಬಗ್ಗೆ ಹೀನಾಯವಾಗಿ ಮಾತನಾಡಿರುವುದು ಸರಿಯಲ್ಲ. ಅಧಿಕಾರದಲ್ಲಿರುವ ರಾಜಕಾರಣಿಗಳು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಕನಿಷ್ಠ ಜ್ಞಾನ ಇಲ್ಲದೆ ಬಾಯಿಗೆ ಬಂದತೆ ಮಾತನಾಡಿರುವ ಮುನಿರರತ್ನ ಅವರ ಶಾಸಕತ್ವನ್ನು ವಿಧಾನಸಭೆ ಸ್ವೀಕರ್ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಮುನಿರತ್ನ ಅವರು ಹಿಂದುಳಿದ ವರ್ಗದವರಾಗಿದ್ದು ಈ ರೀತಿ ಕೀಳು ಭಾಷೆಯಲ್ಲಿ ಮಾತನಾಡಬಾರದು ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಉಪಾಧ್ಯಕ್ಷ ಹಾರೋಹಳ್ಳಿ ಲಕ್ಷ್ಮೇಗೌಡ, ಮುಖಂಡರಾದ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು, ದಲಿತ ಸಂಘಟನೆ ಮುಖಂಡರಾದ ಡಿ.ಕೆ.ಅಂಕಯ್ಯ, ಬ್ಯಾಡರಹಳ್ಳಿ ಪ್ರಕಾಶ್, ಹಾಳಯ್ಯ, ಕನಗನಮರಡಿ ಕೃಷ್ಣಮೂರ್ತಿ, ಮಂಡಿಬೆಟ್ಟಹಳ್ಳಿ ಮಂಜು ಇತರರು ಇದ್ದರು.