ಸಾರಾಂಶ
ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವ ಇಂತಹ ಸೇವಾ ಸಂಸ್ಥೆಗಳ ಸೇವೆ ಮೆಚ್ಚುವಂತಹದ್ದು. ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲುವುದಕೊಸ್ಕರ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ, ಇಂತಹ ಸೇವಾ ಸಂಸ್ಥೆಗಳ ಕಾರ್ಯ ದೇವರೇ ಮೆಚ್ಚುವಂತಹದ್ದಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಸೇವಾ ಮನೋಭಾವವುಳ್ಳ ಸೇವಾ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂದು ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ 317ಜಿ ಪ್ರಾಂತ್ಯ-5, ಜೈನ್ ಮಿಲನ್ ಚಾರಿಟೆಬಲ್ ಟ್ರಸ್ಟ್, ನಾರಾಯಣ ಸೇವಾ ಸಂಸ್ಥಾನ, ಶ್ರೀ ಗುರು ಪುಷ್ಕರ ಜೈನ್ ಸೇವಾ ಸಮಿತಿ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶೇಷಚೇತನರಿಗೆ ಮಾಡ್ಯುಲರ್ ಕೃತಕ ಕೈ ಮತ್ತು ಕಾಲಿನ ಅಂಗಗಳ ವಿತರಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವ ಇಂತಹ ಸೇವಾ ಸಂಸ್ಥೆಗಳ ಸೇವೆ ಮೆಚ್ಚುವಂತಹದ್ದು. ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲುವುದಕೊಸ್ಕರ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ, ಇಂತಹ ಸೇವಾ ಸಂಸ್ಥೆಗಳ ಕಾರ್ಯ ದೇವರೇ ಮೆಚ್ಚುವಂತಹದ್ದಾಗಿದೆ ಎಂದು ಅವರು ಶ್ಲಾಘಿಸಿದರು.ಯಾವುದೇ ಜಾತಿ, ಭೇಧವಿಲ್ಲದೆ ಸುಮಾರು 400 ಜನರಿಗೆ ಕೃತಕ ಅಂಗಾಂಗಗಳ ಜೋಡಣೆಯನ್ನು ಮಾಡುತ್ತಿದ್ದಾರೆ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲದ್ದರಿಂದ ಇದರ ಜೊತೆಗೆ ದಾನಿಗಳು ಸಹ ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಕೃತಕ ಅಂಗಾಂಗಗಳ ಅವಶ್ಯಕತೆ ಇದ್ದು, ನನ್ನ ಕಡೆಯಿಂದ ವೈಯಕ್ತಿಕವಾಗಿ 1 ಲಕ್ಷ ರೂ. ದೇಣಿಗೆಯನ್ನು ನೀಡುವುದಾಗಿ ಅವರು ಘೋಷಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ, ನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಲಯನ್ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷ ಹೇಮಂತ್ ಕುಮಾರ್ ಬನ್ಸಾಲಿ, ಟಿ. ಸುರೇಶ್, ಸುಬ್ರಹ್ಮಣ್ಯ, ಪ್ರಮೀಳಾ ಎಸ್. ಆಚಾರ್, ಮುಖೇಶ್ ಕುಮಾರ್ ಶರ್ಮ, ಅಶೋಕ್ ಭಂಡಾರಿ, ಗುರುರಾಜ್, ವಿನೋದ್ ತಿವಾರಿ, ವಿಜಯಲಕ್ಷ್ಮಿ, ಮದನ್ ಲಾಲ್ ಮಾರೋ, ಮಹಾವೀರ್ ಚಂದ್ ಬನ್ಸಾಲಿ ಮೊದಲಾದವರು ಇದ್ದರು. ಡಾ.ಕೆ. ಶಂಕರೇಗೌಡ ನಿರೂಪಿಸಿದರು.