ತೀರ್ಥಸ್ನಾನ ನಡೆದ ನಂತರ ವೇದಾಂತ ದೇಶಿಕರ ಸನ್ನಿಧಿ ಮತ್ತು ಮಣವಾಳಮಾಮುನಿ ಜೀಯರ್ ಸನ್ನಿಧಿಗೆ ಉತ್ಸವ ನೆರವೇರಿ ಪಾರಾಯಣಗಳು ನಡೆದವು. ಅಶ್ವಿನಿ ನಕ್ಷತ್ರ ಕೂಡಿದ ಶುಭದಿನವಾದ ಭಾನುವಾರ 9ನೇ ತಿರುನಾಳ್ ಅಂಗವಾಗಿ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಗೆ ಸಂಧಾನ ಸೇವೆ, ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಹೋತ್ಸವ ನೆರವೇರಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕಲ್ಯಾಣಿಯಲ್ಲಿ ತೀರ್ಥಸ್ನಾನ ರಾತ್ರಿ ಪಡಿಮಾಲೆ ಮತ್ತು ಯಾಗ ಶಾಲೆಯಲ್ಲಿ ಪೂರ್ಣಾಹುತಿ ನೆರವೇರುವುದರೊಂದಿಗೆ ಚೆಲುವನಾರಾಯಣಸ್ವಾಮಿ ರಾಜಮುಡಿ ಬ್ರಹ್ಮೋತ್ಸವ ಭಾನುವಾರ ಸಂಪನ್ನಗೊಂಡಿತು.ಮಧ್ಯಾಹ್ನ ವೇದಘೋಷದೊಂದಿಗೆ ಕಲ್ಯಾಣಿಯಲ್ಲಿ ಸ್ನಪನಶೆಲ್ವರಿಗೆ ಅಭಿಷೇಕ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಸ್ವಾಮಿಯೊಂದಿಗೆ ಸ್ಥಾನೀಕರು ಅರ್ಚಕ ಪರಿಚಾರಕರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ತೀರ್ಥಸ್ನಾನ ನಡೆದ ನಂತರ ವೇದಾಂತ ದೇಶಿಕರ ಸನ್ನಿಧಿ ಮತ್ತು ಮಣವಾಳಮಾಮುನಿ ಜೀಯರ್ ಸನ್ನಿಧಿಗೆ ಉತ್ಸವ ನೆರವೇರಿ ಪಾರಾಯಣಗಳು ನಡೆದವು. ಅಶ್ವಿನಿ ನಕ್ಷತ್ರ ಕೂಡಿದ ಶುಭದಿನವಾದ ಭಾನುವಾರ 9ನೇ ತಿರುನಾಳ್ ಅಂಗವಾಗಿ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಗೆ ಬೆಳಗ್ಗೆ 8 ಗಂಟೆಗೆ ಸಂಧಾನ ಸೇವೆ ನಡೆದರೆ ಮಧ್ಯಾಹ್ನ 1.30ರ ವೇಳೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಹೋತ್ಸವ ನೆರವೇರಿತು.ರಾತ್ರಿ ದೇವಾಲಯದಲ್ಲಿ ಪಡಿಮಾಲೆ ನೆರವೇರಿದ ನಂತರ ಬ್ರಹ್ಮೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಥಾನಾಚಾರ್ಯರಿಗೆ ಅನೂಚಾನ ಸಂಪ್ರದಾಯದಂತೆ ಮಾಲೆ ಮರ್ಯಾದೆ ನೆರವೇರಿಸಲಾಯಿತು.
ಸ್ಥಾನಾಚಾರ್ಯರಾದ ಶ್ರೀನಿವಾಸ ನರಸಿಂಹನ್ ಗುರೂಜಿ, ಕರಗಂರಾಮಪ್ರಿಯ ಹಾಗೂ ಕೋವಿಲ್ ನಂಬಿ ಪ್ರಸನ್ನಕುಮಾರ್ ಸಂವತ್ಸರದ ರಾಜಮುಡಿ ಬ್ರಹ್ಮೋತ್ಸವ ಮಾಲೆಮರ್ಯಾದೆ ಸ್ವೀಕರಿಸಿದರು. ಅಂತಿಮವಾಗಿ ಯಾಗ ಶಾಲೆಯಲ್ಲಿ ಪೂರ್ಣಾಹುತಿ ನೆರವೇರುವುದರೊಂದಿಗೆ ಪರಾಭವನಾಮ ಸಂವತ್ಸರದ ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವ ವಿದ್ಯುಕ್ತವಾಗಿ ಸಂಪನ್ನವಾಯಿತು.ಬ್ರಹ್ಮೋತ್ಸವ ಕೊನೆ ದಿನದಂದು ನಾಡಿನ ವಿವಿಧಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ದೇವರದರ್ಶನ ಪಡೆದರು. ರಾಜಮುಡಿ ಬ್ರಹ್ಮೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ ವಜ್ರಖಚಿತ ರಾಜಮುಡಿ ಕಿರೀಟ ಮತ್ತು ತಿರುವಾಭರಣಗಳನ್ನು ಪರಿಶೀಲಿಸಿ ಸೋಮವಾರ ಇಂದು ಜಿಲ್ಲಾ ಖಜಾನೆಗೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನ.24 ವಿಷ್ಣುದೀಪೋತ್ಸವ:ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನ.24ರ ಹುಣ್ಣಿಮೆಯಂದು ವಿಷ್ಣುದೀಪೋತ್ಸವ ನೆರವೇರಲಿದೆ.
ಅಂದು ರಾತ್ರಿ ಚೆಲುವನಾರಾಯಣಸ್ವಾಮಿಗೆ ವೇದಘೋಷದೊಂದಿಗೆ ಕುಂಬಾರತಿ ನೆರವೇರಿಸಿ ಒಳಪ್ರಾಕಾರದ ಪ್ರದಕ್ಷಣಿಯ ನಂತರ ಗರುಡಗಂಬದ ಮೇಲೆ ಕುಂಬಾರತಿ ಪ್ರತಿಷ್ಠಾಪಿಸಲಾಗುತ್ತದೆ. ಈ ವೇಳೆ ದೇವಾಲಯದಲ್ಲಿ ನೂರಾರು ಹಣತೆಗಳನ್ನು ಹಚ್ಚಿ ರಾಜಗೋಪುರ ಮುಂಭಾಗ ಕರುಗುಸುಡಲಾಗುತ್ತದೆ. ಮೂರು ದಿನಗಳ ಕಾಲ ದೇವಾಲಯದ ಒಳಪ್ರಾಕಾರದಲ್ಲಿ ಹಣತೆಗಳನ್ನು ಬೆಳಗಿಸಲಾಗುತ್ತದೆ. ವಿಷ್ಣುದೀಪೋತ್ಸವದ ನಂತರ 40 ದಿನಗಳಕಾಲ ದೇವಾಲಯದಲ್ಲಿ ಯಾವುದೇ ಉತ್ಸವಗಳು ಅಭಿಷೇಕ ನಡೆಯುವುದಿಲ್ಲ. 2027ರ ಜನವರಿ ಮೊದಲವಾರ ಕೊಠಾರೋತ್ಸವದೊಂದಿಗೆ ಚೆಲುವನಾರಾಯಣಸ್ವಾಮಿಯ ಉತ್ಸವಗಳು ಪುನರಾರಂಭವಾಗಲಿದೆ.