ರಾಜಸೀಟು ಉದ್ಯಾನವನದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜಸೀಟು ಉದ್ಯಾನವನದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ರಾಜಸೀಟು ಉದ್ಯಾನವನ ಪುಟಾಣಿ ರೈಲು ವಿಭಾಗದಲ್ಲಿ ಸುಮಾರು 2 ಕೋಟಿ ರು. ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದ್ದು, ಪ್ರವಾಸಿಗರಿಗೆ ಶುದ್ಧ ಹಾಗೂ ಗುಣಮಟ್ಟದ ಆಹಾರ ಪೂರೈಸುವುದು ಉದ್ದೇಶ ಎಂದು ಡಾ. ಮಂತರ್ ಗೌಡ ಹೇಳಿದರು.

ಗುಣಮಟ್ಟದ ಆಹಾರ ನೀಡುವುದರ ಜೊತೆಗೆ ಪರಿಸರ ಶುಚಿತ್ವಕ್ಕೆ ಒತ್ತು ನೀಡುವುದು ಆದ್ಯತೆಯಾಗಿದೆ. ಪುಟಾಣಿ ರೈಲು ಮಾರ್ಗದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಪುಟಾಣಿ ರೈಲು ಸಂಬಂಧ ದಕ್ಷಿಣ ಭಾಗದ ನೈರುತ್ಯ ರೈಲ್ವೆ ವಿಭಾಗದವರು ವರದಿ ನೀಡಿದ್ದು, ವಿದ್ಯುತ್ ಚಾಲಿತ ಪುಟಾಣಿ ರೈಲು ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.

ಫುಡ್‍ಕೋರ್ಟ್ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಪ್ರವಾಸಿಗರ ಅನುಕೂಲಕ್ಕೆ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಡಾ. ಮಂತರ್ ಗೌಡ ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ರಾಜಸೀಟು ಉದ್ಯಾನವನಕ್ಕೆ ಪ್ರತಿ ವರ್ಷ 65 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದು, ರಾಜಸೀಟನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಪುಟಾಣಿ ರೈಲು ಜಾಗಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಆಗದಂತೆ ಫುಡ್‍ಕೋರ್ಟ್ ನಿರ್ಮಾಣ ಮಾಡಬೇಕು. ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರಸಭೆ ಅಧ್ಯಕ್ಷ ಪಿ. ಕಲಾವತಿ ಮಾತನಾಡಿ, ರಾಜಾಸೀಟು ಉದ್ಯಾನವನ ವೀಕ್ಷಣೆಗೆ ರಾಷ್ಟ್ರದ ವಿವಿಧ ಕಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ರಾಜಸೀಟನ್ನು ಮತ್ತಷ್ಟು ಆಕರ್ಷಣೆಗೊಳಿಸುವಲ್ಲಿ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಮಡಿಕೇರಿ ನಗರದ ಅಭಿವೃದ್ಧಿಗೆ ನಗರಸಭೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮಡಿಕೇರಿ ನಗರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಕ್ಕೆ ಸದಾ ಕೈಜೋಡಿಸಲಾಗುವುದು ಎಂದು ಹೇಳಿದರು.

ನಗರಸಭೆ ಸದಸ್ಯರಾದ ಸಬಿತಾ ಮಾತನಾಡಿ, ರಾಜಸೀಟು ಉದ್ಯಾನವನ ಮತ್ತಷ್ಟು ಹಸಿರುಮಯವಾಗಬೇಕು. ಕುಂದಗಳು, ಹೂಗಳು ಇನ್ನಷ್ಟು ಆಕರ್ಷಣೀಯವಾಗಬೇಕು. ಫಾಟ್‍ಗಳನ್ನು ಹೆಚ್ಚಿಸಬೇಕು. ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಅರುಣ್ ಶೆಟ್ಟಿ, ಶಾರದ ನಾಗರಾಜು, ನಗರಸಭೆ ಸದಸ್ಯರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಹಾಗೂ ನಗರಸಭೆ ಪೌರಾಯುಕ್ತರು ಇದ್ದರು. ತೆನ್ನಿರಾ ಮೈನಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.